ಗುವಾಹಟಿ:ಪಿಎಫ್ಐ ಸಂಘಟನೆಯ ವಿರುದ್ಧ ಅಸ್ಸೋಂ ಪೊಲೀಸರ ಕಾರ್ಯಾಚರಣೆ ರಾಜ್ಯದೊಳಗೆ ಮತ್ತು ಹೊರಗೆ ಜಾರಿಯಲ್ಲಿದೆ. ಕಳೆದ ರಾತ್ರಿಯಿಂದ ಪಿಎಫ್ಐ ಮುಖಂಡರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸದ್ಯ ರಾಜ್ಯಾದ್ಯಂತ ಪೊಲೀಸರು 8 ಜನ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ರಾಜ್ಯದ ಇತರ ಭಾಗಗಳಲ್ಲಿ ಹಾಗೂ ಬರ್ಪೇಟಾ ಜಿಲ್ಲೆಯ ನಗರ್ಬೆರಾ ಮತ್ತು ದಕ್ಷಿಣ ಬಾರ್ಪೇಟಾ ಪ್ರದೇಶಗಳಲ್ಲಿ ಪಿಎಫ್ಐ ವಿರುದ್ಧ ದಾಳಿಗಳನ್ನು ನಡೆಸಲಾಗಿದೆ. ರಾತ್ರಿ 3 ಗಂಟೆಯಿಂದ ಉನ್ನತ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಬಾರ್ಪೇಟಾ ಜಿಲ್ಲೆಯಲ್ಲಿ 7 ಜನರನ್ನು ಬಂಧಿಸಲಾಗಿದೆ. ಖುರ್ಶೆದ್ ಆಲಂ, ಶಾಹಿದುಲ್ ಇಸ್ಲಾಂ, ರುಹುಲ್ ಅಮೀನ್, ಸದಾಗರ್ ಅಲಿ, ಸಲೇಮಾ ಯಸ್ಮಿತಾ, ರಫೀಕುಲ್ ಇಸ್ಲಾಂ ಮತ್ತು ಆಸಿಕ್ ಇಕ್ಬಾಲ್ ಬಂಧಿತರು. ಕೆಲವು ದಿನಗಳ ಹಿಂದೆ ಗೋಲ್ಪಾರಾ ಜಿಲ್ಲೆಯಲ್ಲಿ ನಡೆದ ಪಿಎಫ್ಐ ಪ್ರತಿಭಟನೆಯಲ್ಲಿ ಇವರು ಪಾಲ್ಗೊಂಡಿದ್ದರು ಎನ್ನಲಾಗ್ತಿದೆ.