ನವದೆಹಲಿ:ಒಂದು ಸಮುದಾಯದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಆ್ಯಪ್‌ವೊಂದು ಕೆಲಸ ಮಾಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಆ್ಯಪ್‌ಗೆ ನಿರ್ಬಂಧ ವಿಧಿಸಲಾಗಿದೆ.
ಗಿಟ್‌ಹಬ್ ಪ್ಲಾಟ್‌ಫಾರ್ಮ್‌ನಲ್ಲಿ ರಚಿಸಲಾದ 'ಬುಲ್ಲಿ ಬಾಯಿ' ಹೆಸರಿನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಪರಿಚಿತ ವ್ಯಕ್ತಿಗಳ ಗುಂಪೊಂದು ತನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಪತ್ರಕರ್ತೆ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತಾಗಿ ದೆಹಲಿ ಆಗ್ನೇಯ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 509ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಗಿಟ್‌ಹಬ್ ಆ್ಯಪ್‌ನಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್‌ಲೋಡ್ ಮಾಡಿ ಹರಾಜು ಮಾಡಿದ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಕೆಲವು ತಿಂಗಳ ಹಿಂದಷ್ಟೇ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಘಟನೆ ಸಂಬಂಧ ನಿನ್ನೆ ರಾತ್ರಿ ಟ್ವೀಟ್ ಮಾಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಈ ಕುರಿತು ಕ್ರಮ ತೆಗೆದುಕೊಳ್ಳಲಾಗಿದೆ. ಬುಲ್ಲಿ ಬಾಯಿ ಅಪ್ಲಿಕೇಶನ್ ಹಿಂದೆ ಇರುವ ಗಿಟ್‌ಹಬ್ ಬಳಕೆದಾರರನ್ನು ನಿರ್ಬಂಧಿಸಲಾಗಿದ್ದು, ಮುಂದಿನ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.