ಜಗಿತ್ತಲಾ (ತೆಲಂಗಾಣ): ಅಪರಾಧಕ್ಕೆ ಯಾರಾದರೂ ಶಿಕ್ಷೆ ಅನುಭವಿಸಲೇಬೇಕು. ಇದೇ ಕಾನೂನು, ಇದೇ ನ್ಯಾಯ. ತೆಲಂಗಾಣದ ಜಗಿತ್ತಲಾ ಜಿಲ್ಲೆಯಲ್ಲಿ ಕೋಳಿ ವಿಚಾರದಲ್ಲೂ ಈ ನಿಯಮ ಪಾಲಿಸಲಾಗಿದೆ.
ಹೌದು, ವ್ಯಕ್ತಿಯೊಬ್ಬರ ಸಾವಿಗೆ ಹುಂಜ ಕಾರಣವೆಂದು ಆರೋಪಿಸಿ ಗೊಲ್ಲಪಲ್ಲಿ ಪೊಲೀಸರು ಕೋಳಿಯನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ಪೊಲೀಸ್ ಠಾಣೆಯಲ್ಲೇ ಅದಕ್ಕೆ ಆಹಾರದ ವ್ಯವಸ್ಥೆ ಮಾಡಿದ್ದಾರೆ.
ವ್ಯಕ್ತಿಯ ಕೊಲೆ ಆರೋಪದಡಿ ಕೋಳಿ ಅರೆಸ್ಟ್ ಪ್ರಕರಣ ಹಿನ್ನೆಲೆ
ಜಗಿತ್ತಲಾ ಜಿಲ್ಲೆಯ ಗೊಲ್ಲಪಲ್ಲಿ ಮಂಡಲದ ಲೋಥುನೂರ್ ಗ್ರಾಮದಲ್ಲಿ ಇತ್ತೀಚೆಗೆ ಸ್ಥಳೀಯರು ಕೋಳಿ ಪಡೆ/ಕೋಳಿ ಕಾಳಗವನ್ನು ಆಯೋಜಿಸಿದ್ದರು. ತನುಗುಲಾ ಸತೀಶ್ ಎಂಬ ವ್ಯಕ್ತಿ ತಮ್ಮ ಕೋಳಿಯ ಕಾಲಿಗೆ ಚಾಕು ಕಟ್ಟುವ ವೇಳೆ, ಕೋಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಈ ಸಂದರ್ಭ ಸತೀಶ್ ಗುಪ್ತಾಂಗಕ್ಕೆ ಚಾಕು ಚುಚ್ಚಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸತೀಶ್ ಮೃತಪಟ್ಟಿದ್ದಾನೆ.
ಘಟನೆ ಬಗ್ಗೆ ಸತೀಶ್ ಕುಟುಂಬಸ್ಥರು ದೂರು ನೀಡಿದ ಬೆನ್ನಲ್ಲೇ ಪೊಲೀಸರು ಕೋಳಿಯನ್ನು ಬಂಧಿಸಿ, ಲಾಕಪ್ನಲ್ಲಿರಿಸಿದ್ದಾರೆ.