ನವದೆಹಲಿ: ತಾನು ಕೆಲಸ ಮಾಡುತ್ತಿದ್ದವರ ಮನೆಯಿಂದಲೇ 8 ಕೋಟಿ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣ ಕದ್ದಿದ್ದ ಆರೋಪಿ ಹಾಗೂ ಆತನ ಸಂಬಂಧಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ಪ್ರದೇಶದಲ್ಲಿ ಘಟನೆ ನಡೆದಿದೆ.
ಆರೋಪಿಯನ್ನು ಬಿಹಾರ ನಿವಾಸಿ ಮೋಹನ್ ಕುಮಾರ್ (26) ಎಂದು ಗುರುತಿಸಲಾಗಿದೆ. ಅಪ್ರಾಪ್ತ ವಯಸ್ಕನೆಂಬ ಶಂಕೆಯ ಆಧಾರದಲ್ಲಿ ಕುಮಾರ್ ಈತನ ಸಂಬಂಧಿಯನ್ನು ಬಾಲ ನ್ಯಾಯ ಮಂಡಳಿ ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮನೆಯ ಮಾಲೀಕರು ಜುಲೈ 4 ರಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಿದ್ದರು. ಅಮೆರಿಕಕ್ಕೆ ಹೋಗುವ ಮುನ್ನ, ಕಳೆದ ಐದು ವರ್ಷಗಳಿಂದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ನಿಗೆ ಮನೆಯ ಕೀಲಿಕೈ ನೀಡಿದ್ದರು. ಆದರೆ ಜುಲೈ 18 ರಂದು ಮನೆಯ ಮಾಲೀಕರಿಗೆ ಅವರ ಸಂಬಂಧಿಯೊಬ್ಬರು ಫೋನ್ ಮಾಡಿ, ಅವರ ಮನೆಯಲ್ಲಿನ ಕಾರು, ಹಣ ಮತ್ತು ಒಡವೆ ಸೇರಿದಂತೆ 8 ರಿಂದ 10 ಕೋಟಿ ರೂಪಾಯಿಗಳ ವಸ್ತುಗಳನ್ನು ಕುಮಾರ್ ದರೋಡೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದರು.