ಕರ್ನಾಟಕ

karnataka

ETV Bharat / crime

ಮುರುಡೇಶ್ವರದ ಯುವತಿ ಅತ್ಯಾಚಾರ-ಕೊಲೆ ಪ್ರಕರಣ: ಮರು ತನಿಖೆಗೆ ಆದೇಶ - ಹೈಕೋರ್ಟ್

ಮುರುಡೇಶ್ವರದ ಯುವತಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್ ನಲ್ಲಿ ಹೆಸರಿದ್ದ 7 ಮಂದಿ ಮೊಹಮ್ಮದ್ ಸಾಧಿಕ್ ದೊಣ್ಯ, ಖಾಸೀಫ್ ಮೊಹಮ್ಮದ್, ಮೊಹಮ್ಮದ್ ನಾಸೀರ್, ಯಾಸೀನ್ ಶೇಖ್, ನೀಲಗಿರಿ ಸಿದ್ದಿ ಮೊಹಮ್ಮದ್, ಹಬೀಬ್ ಶೇಖ್, ಅಂಡಾ ನಾಸೀರ್ ಶೇಖ್ ಅವರನ್ನು ಮರು ವಿಚಾರಣೆ ನಡೆಸುವಂತೆ ಹೈಕೋರ್ಟ್​ ಆದೇಶಿಸಿದೆ.

ಧಾರವಾಡ ಹೈಕೋರ್ಟ್
ಧಾರವಾಡ ಹೈಕೋರ್ಟ್

By

Published : Jul 25, 2021, 2:25 PM IST

ಭಟ್ಕಳ: ಕಳೆದ 11 ವರ್ಷಗಳ ಹಿಂದೆ ಮುರುಡೇಶ್ವರದ ಹಿರೇಧೋಮಿಯಲ್ಲಿ ನಡೆದ ಯುವತಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಬಂಧಿತನಾಗಿದ್ದ ಆರೋಪಿಯನ್ನು ನಿರಪರಾಧಿ ಎಂದು ಕಾರವಾರ ಜಿಲ್ಲಾ ನ್ಯಾಯಾಲಯ 4 ವರ್ಷಗಳ ಹಿಂದೆ ನೀಡಿದ್ದ ತೀರ್ಪನ್ನು ಧಾರವಾಡ ಹೈಕೋರ್ಟ್ ಎತ್ತಿಹಿಡಿದಿದೆ.

ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ವೆಂಕಟೇಶ್ ಹರಿಕಾಂತ್ ಎನ್ನುವ ವ್ಯಕ್ತಿ 6 ವರ್ಷ 8 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದನು. ನಾಲ್ಕು ವರ್ಷದ ಹಿಂದೆ ಈತನ ವಿರುದ್ಧವಿದ್ದ ಪ್ರಕರಣವನ್ನು ಖುಲಾಸೆಗೊಳಿಸಲಾಗಿತ್ತು. ಈ ಕುರಿತು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಧಾರವಾಡ ಉಚ್ಛ ನ್ಯಾಯಾಲಯ‌ದಿಂದ ನಿರಪರಾಧಿ ಎಂಬ ತೀರ್ಪು ಬಂದಿದೆ. ಅತ್ಯಾಚಾರ-ಹತ್ಯೆಯಾಗಿದ್ದ ಸ್ಥಳದಲ್ಲಿ ವೀರ್ಯದ ಅಂಶ, ಯುವತಿಯ ಕೈಯಲ್ಲಿ ಅಪರಾಧಿಯ ಕೂದಲುಗಳು ಪತ್ತೆಯಾಗಿತ್ತು. ಅದನ್ನು ಸಂಗ್ರಹಿಸಿ ಹೈದರಾಬಾದ್​ನ ವಿಧಿ ವಿಜ್ಞಾನ ಇಲಾಖೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವೆಂಕಟೇಶ್ ಅವರ ಡಿಎನ್‍ಎ ಪರೀಕ್ಷೆಯನ್ನೂ ನಡೆಸಲಾಗಿದ್ದು, 11 ತಿಂಗಳ ಬಳಿಕ ಬಂದ ವರದಿಯಲ್ಲಿ ಆ ವೀರ್ಯದ ಮಾದರಿ ವೆಂಕಟೇಶ್ ಅವರದ್ದಲ್ಲ ಎಂದು ತಿಳಿದುಬಂದಿತ್ತು.

ಮರು ತನಿಖೆಗೆ ಆದೇಶ:ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ‌ ಸಿಗಬೇಕಾದಲ್ಲಿ ನೈಜ ಆರೋಪಿಗಳ‌ ಬಂಧನವಾಗಬೇಕು‌ ಎಂದು ಹೇಳಿರುವ ಉಚ್ಛ ನ್ಯಾಯಾಲಯ‌ ಮುರುಡೇಶ್ವರ ಪಿಎಸ್ಐ ಅವರನ್ನು ತನಿಖಾಧಿಕಾರಿಯಾಗಿ ಮಾಡಿ ಪ್ರಕರಣದ ಮರು ತನಿಖೆಗೆ ಆದೇಶಿಸಿದೆ. 11 ವರ್ಷದ ಹಿಂದಿನ ಪ್ರಕರಣ ಮರು ತನಿಖೆಯಾಗುತ್ತಿದ್ದು, ಮೊದಲು ಎಫ್.ಐ.ಆರ್ ನಲ್ಲಿ ಹೆಸರಿದ್ದ 7 ಮಂದಿ ಮೊಹಮ್ಮದ್ ಸಾಧಿಕ್ ದೊಣ್ಯ, ಖಾಸೀಫ್ ಮೊಹಮ್ಮದ್, ಮೊಹಮ್ಮದ್ ನಾಸೀರ್, ಯಾಸೀನ್ ಶೇಖ್, ನೀಲಗಿರಿ ಸಿದ್ದಿ ಮೊಹಮ್ಮದ್, ಹಬೀಬ್ ಶೇಖ್, ಅಂಡಾ ನಾಸೀರ್ ಶೇಖ್ ಅವರನ್ನು ಮರು ವಿಚಾರಣೆಗೆ ಆದೇಶಿಸಲಾಗಿದೆ. ಅವರೆಲ್ಲರ ವೀರ್ಯ, ರಕ್ತ, ಉಗುರು, ಕೂದಲಿನ ಮಾದರಿ ಸಂಗ್ರಹಿಸಲು ಸೂಚನೆ‌ ನೀಡಲಾಗಿದೆ. ಹೈಕೋರ್ಟ್‌ನ ಈ ಆದೇಶ ಇಡೀ ಮುರುಡೇಶ್ವರ ಭಾಗದಲ್ಲೇ ಮತ್ತೊಮ್ಮೆ ಸಂಚಲನ ಮೂಡಿಸಿದೆ.

ಪ್ರಕರಣದ ಹಿನ್ನೆಲೆ: 2010 ಅಕ್ಟೋಬರ್ 23 ರಂದು ಮೊಹಮ್ಮದ್ ಸಾದಿಕ್‌ ಎನ್ನುವರ ಮನೆಯಲ್ಲಿ ಮನೆ ಕೆಲಸಕ್ಕಿದ್ದ ಅದೇ ಗ್ರಾಮದ ಬಡ ಯುವತಿಯೊಬ್ಬಳನ್ನು ಅತ್ಯಾಚಾರ ಎಸಗಿ ಕಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಯುವತಿ ಮನೆಗೆ ಬಾರದಾಗ ಆತಂಕಗೊಂಡ ಪೋಷಕರು, ಹುಡುಕಾಡಿದಾಗ ಕಟ್ಟಿಗೆ ಶೆಡ್‌ ಬಳಿ ಶವ ಪತ್ತೆಯಾಗಿತ್ತು. ಆಕೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಭಟ್ಕಳದಲ್ಲಿ ನಡೆದ ಈ ಪ್ರಕರಣ ಕೋಮು ರೂಪ ಪಡೆದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಸಂತ್ರಸ್ತೆಯ ತಂದೆ, ಮೊದಲಿಗೆ ಮುರುಡೇಶ್ವರ ಠಾಣೆಯಲ್ಲಿ 9 ಮಂದಿ ಅನ್ಯಕೋಮಿನವರ ವಿರುದ್ಧ ದೂರು ನೀಡಿದ್ದು, ಅದರಲ್ಲಿ ಮಗಳು‌ ಕೆಲಸಕ್ಕಿದ್ದ ಮನೆಮಾಲೀಕ, ಆತನ ಮಗನ ಹೆಸರನ್ನು ಸಹ ಉಲ್ಲೇಖಿಸಲಾಗಿತ್ತು. ಆದರೆ ತಕ್ಷಣದ ಬೆಳವಣಿಗೆಯಲ್ಲಿ ಕೊಲೆಯಾದ ಯುವತಿ ತಂದೆ, ವೆಂಕಟೇಶ್ ಹರಿಕಾಂತ್ ಹೆಸರು‌ ಉಲ್ಲೇಖಿಸಿ ದೂರು‌ ನೀಡಿದ್ದರು. ಅದರ ಅನ್ವಯ ವೆಂಕಟೇಶ್ ಹರಿಕಾಂತನನ್ನು ಪೊಲೀಸರು ಬಂಧಿಸಿದ್ದರು. ಅತ್ಯಂತ ಪಾರದರ್ಶಕ ಹಾಗೂ ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು, ಒಟ್ಟು 51 ಸಾಕ್ಷ್ಯಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಒದಗಿಸಿದ್ದರು. ಆದರೆ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆಸಿ, ಆರೋಪಿಯನ್ನು ಬಂಧನ ಮುಕ್ತಗೊಳಿಸಿತ್ತು. ಇದರ ವಿರುದ್ಧ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದು. ಇದೀಗ ಹೈಕೋರ್ಟ್ ಕೂಡ ಆರೋಪಿ ವೆಂಕಟೇಶ್ ಹರಿಕಾಂತನನ್ನು ದೋಷಮುಕ್ತಗೊಳಿಸಿದೆ.

ABOUT THE AUTHOR

...view details