ಬೆಂಗಳೂರು:ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಬಲು ಅಪರೂಪ ಎನ್ನಿಸಿಕೊಂಡಿರುವ ಹಾಗೂ ನಿಷೇಧಿತಗೊಂಡಿರುವ, ತಿಮಿಂಗಿಲ ವೀರ್ಯದಿಂದ ಹೊರಬರುವ ಮೇಣದ ರೀತಿಯಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಸರಬರಾಜು ಮಾಡುತ್ತಿದ್ದ ನಾಲ್ವರು ದಂಧೆಕೋರರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸೈಯದ್ ತಜ್ಮೀಲ್, ಸಲೀಂ ಪಾಷಾ, ರಫಿ ಉಲ್ಲಾ ಮತ್ತು ನಾಸೀರ್ ಪಾಷಾ ಬಂಧಿತ ಅರೋಪಿಗಳು. ಬಂಧಿತರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 8 ಕೋಟಿ ರೂಪಾಯಿ ಮೌಲ್ಯ ಬೆಲೆಬಾಳುವ 6 ಕೆಜಿ 700 ಗ್ರಾಂ ತೂಕದ ಅಂಬೆರ್ಗ್ರಿಸ್ (ಸ್ಪರ್ಮ್ ವೇಲ್) ವಶಪಡಿಸಿಕೊಳ್ಳಲಾಗಿದೆ.
ಓದಿ: ಕಾರವಾರ: ತಿಮಿಂಗಿಲದ ವಾಂತಿಯ ತುಣುಕು ಪತ್ತೆ... ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಏನಿದು ಅಂಬೆರ್ಗ್ರಿಸ್:
ಸ್ಪರ್ಮ್ ವೇಲ್ ಪ್ರಭೇಧದ ತಿಮಿಂಗಿಲವು ಹೊರಹಾಕುವ ವೀರ್ಯಾಣು ಹಾಗೂ ವಾಂತಿಯನ್ನು ಅಂಬೆರ್ಗ್ರಿಸ್ ಎನ್ನುತ್ತಾರೆ. ಇದು ಘನ ಮೇಣದ ವಾಸನೆಯಿಂದ ಕೂಡಿರುತ್ತದೆ. ಈ ವಸ್ತುವನ್ನು ಸುಗಂಧ ದ್ರವ್ಯ ಹಾಗೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅರಬ್, ಚೀನಾ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಅಪಾರ ಬೇಡಿಕೆಯಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ಸುಮಾರು ಒಂದೂವರೆ ಕೋಟಿ ಬೆಲೆ ಇದೆ.
ಸುಗಂಧ ದ್ರವ್ಯಕ್ಕೆ ಬಳಕೆಯಾಗುವ ಅಂಬೆರ್ಗ್ರಿಸ್ ಭಾರತದಲ್ಲಿ ಕಾನೂನು ಪ್ರಕಾರ ಮಾರಾಟ ಮಾಡುವಂತಿಲ್ಲ. ಸಂಶೋಧನೆಗೆ ಮಾತ್ರ ಬಳಸಬಹುದಾಗಿದೆ. ಮೇಣದ ರೀತಿಯ ವಸ್ತುವನ್ನು ಕೋಲಾರ ಮೂಲದ ವ್ಯಕ್ತಿಯೊಬ್ಬ ನಗರಕ್ಕೆ ಬಂದು ಆರೋಪಿಗಳಿಗೆ ಒಂದು ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಇದನ್ನು ಬೇರೆ ದಂಧೆಕೋರರಿಗೆ ಮಾರಾಟಕ್ಕೆ ಯೋಜನೆ ರೂಪಿಸಿದ್ದಾಗ ಕೆ.ಜಿ.ಹಳ್ಳಿ ಪೊಲೀಸರ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಸ್ಪರ್ಮ್ ವೇಲ್ ಎಂಬ ವಿಶೇಷ ತಿಮಿಂಗಿಲ:
ಇನ್ನು ಸ್ಪರ್ಮ್ ವೇಲ್ ಜಾತಿಯ ತಿಮಿಂಗಿಲದಲ್ಲಿ ಮಾತ್ರ ಇಂತಹ ವಸ್ತು ಉತ್ಪತಿಯಾಗುತ್ತದೆ. ಈ ಪ್ರಭೇದದ ತಿಮಿಂಗಿಲ ಕಾಟ್ಲಾ ಫಿಶ್ ಮತ್ತು ಸ್ಕ್ವಿಡ್ ಗಳನ್ನ ಭೇಟೆಯಾಡಿ ತಿನ್ನುತ್ತದೆ. ಹೀಗಾಗಿ ಕಾಟ್ಲಾ ಫಿಶ್ನ ಮುಳ್ಳುಗಳು ತಿಮಿಂಗಿಲದ ಹೊಟ್ಟೆಯಲ್ಲಿ ಹಲವು ತಿಂಗಳವರೆಗೂ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆಯಲ್ಲಿ ರಾಸಾಯನಿಕವಾಗಿ ಮೇಣದ ಕಲ್ಲಿನಂತೆ ರಚನೆಯಾಗುತ್ತದೆ. ತಿಮಿಂಗಿಲು ಇದನ್ನು ವಾಂತಿ ಅಥವಾ ವೀರ್ಯದ ಮೂಲಕ ಹೊರ ಹಾಕುತ್ತದೆ. ಇದು ಸಾಕಷ್ಟು ಹಗುರವಾಗಿರುವ ಕಾರಣ ನೀರಿನಲ್ಲಿ ತೇಲುತ್ತದೆ. ಇಂತಹ ತೇಲುವ ಅಂಬೆರ್ಗ್ರಿಸ್, ಮೊದಲ ವಾರ ವಿಪರೀತ ವಾಸನೆ ಇರುತ್ತೆ. ನಂತರದ ದಿನಗಳಲ್ಲಿ ಇದು ಸುವಾಸನೆ ಬೀರುವ ಮೇಣದ ಕಲ್ಲಿನ ರೀತಿ ಪರಿವರ್ತನೆಯಾಗುತ್ತದೆ. ಸಾಮಾನ್ಯವಾಗಿ ಇದು ಕರಾವಳಿ ಭಾಗದಲ್ಲಿ ಕಂಡು ಬರುತ್ತದೆ.