ಧಾರ್ (ಮಧ್ಯಪ್ರದೇಶ): ರಾಜ್ಯದ ಕಾಂಗ್ರೆಸ್ ಪಕ್ಷದ ಶಾಸಕ ಉಮಂಗ್ ಸಿಂಘಾರ್ ತಮ್ಮ ಮೇಲೆ ಅತ್ಯಾಚಾರವೆಸಗಿ, ಮಾನಸಿಕ ಹಿಂಸೆ ನೀಡಿದ್ದಾರೆಂದು ಆರೋಪಿಸಿ 38 ವರ್ಷದ ವಿವಾಹಿತೆಯೊಬ್ಬರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧಗಳು) ಮತ್ತು 498 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಾಸಕನ ವಿರುದ್ಧ ಎಫ್ಐಆರ್ ದಾಖಲಾಗಿರುವುದನ್ನು ಗೃಹ ಸಚಿವ ನರೋತ್ತಮ್ ಮಿಶ್ರಾ ಖಚಿತಪಡಿಸಿದ್ದಾರೆ.
ಶಾಸಕರ ಪತ್ನಿಯ ವಿರುದ್ಧವೂ ಪ್ರಕರಣ: ಕೆಲ ದಿನಗಳ ಹಿಂದಷ್ಟೇ ಶಾಸಕ ಸಿಂಘಾರ್ ಪತ್ನಿ ವಿರುದ್ಧವೂ ಪ್ರಕರಣವೊಂದು ದಾಖಲಾಗಿತ್ತು. ಶಾಸಕರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೂ, ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪ್ರಕರಣ ದಾಖಲಿಸಿದ್ದಳು. ಈ ವಿಚಾರದಲ್ಲಿ ಶಾಸಕರ ಬೆಂಬಲಿಗರು ಸಂತ್ರಸ್ತೆಯ ಮನವೊಲಿಸಲು ಯತ್ನಿಸಿದರಾದರೂ, ಇದಕ್ಕೊಪ್ಪದೇ ಪ್ರಕರಣ ದಾಖಲಿಸಿದ್ದರು.
ದೂರು ದಾಖಲಿಸಿದ ಮಹಿಳೆ ಶಾಸಕರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಳು. ಈಕೆ ಕಳೆದ ಹಲವಾರು ವರ್ಷಗಳಿಂದ ಶಾಸಕರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದು, ಈ ನಡುವೆ ಶಾಸಕರ ಪತ್ನಿ ಪಿಂಕಿ ಸಿಂಘಾರ್ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಕೆಲಸದಾಕೆ ಆರೋಪಿಸಿದ್ದರು.
ಪತ್ನಿ ವಿರುದ್ಧ ಶಾಸಕರ ಆರೋಪ:ನನ್ನ ವಿರುದ್ಧ ದೂರು ದಾಖಲಿಸಿರುವ ಮಹಿಳೆ ತಮಗೆ10 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಉಮಂಗ್ ಸಿಂಘಾರ್ ಆರೋಪಿಸಿದ್ದಾರೆ. ಹಣ ನೀಡದಿದ್ದರೆ ನನ್ನ ರಾಜಕೀಯ ಜೀವನವನ್ನೇ ಕೊನೆಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.
ಕಳೆದ ಹಲವು ದಿನಗಳಿಂದ ಆಕೆ ನನ್ನಿಂದ ಹತ್ತು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದಿರುವ ಕಾರಣದಿಂದ ನನ್ನ ವಿರುದ್ಧ ಪೊಲೀಸ್ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಸಿಂಘಾರ್ ಹೇಳಿದ್ದಾರೆ.