ದೇವನಹಳ್ಳಿ/ದೊಡ್ಡಬಳ್ಳಾಪುರ:ದೇವನಹಳ್ಳಿ ಪಟ್ಟಣದ ಐತಿಹಾಸಿಕ ಕೋಟೆ ಪಕ್ಕದಲ್ಲಿನ ಸಿಹಿ ನೀರಿನ ಕೆರೆಗೆ ನೀರು ಹರಿದು ಬರುವ ರಾಜಕಾಲುವೆಗಳು ಕಾಲ ಕ್ರಮೆಣ ಒತ್ತುವರಿಯಾಗಿದ್ದು. ಕೆರೆ ಹಲವು ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿತ್ತು. ಹೀಗಾಗಿ ಕೆರೆ ಮೂಲ ಉಳಿಸಬೇಕು ಅಂತ ಕಿರಣ್ ಎಂಬವವರು ಹಾಗೂ ಇನ್ನಿತರ ವಕೀಲರು ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಿಕೊಂಡಿದ್ದು ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ರಾಜಕಾಲುವೆ ಒತ್ತುವರಿ ತೆರವಿಗೆ ಆದೇಶ ಮಾಡಿದೆ.
ಹೀಗಾಗಿ ಕೋರ್ಟ್ ಆದೇಶದಂತೆ ವಕೀಲರು ಅಧಿಕಾರಿಗಳು ಮತ್ತು ಪೊಲೀಸರು ರಾಜಕಾಲವೆ ಒತ್ತುವರಿ ಮಾಡಿ ಕಟ್ಟಿದ್ದಾರೆ ಎನ್ನಲಾದ ಮನೆಯ ಗೋಡೆಯನ್ನು ಕೆಡವಿ ಕಾಲುವೆ ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ ಅಷ್ಟರಲ್ಲೇ ಮನೆ ಮುಂದೆ ಹೈಡ್ರಾಮ ಮಾಡಿದ ಜನರು ಮನೆ ಗೋಡೆ ಕೆಡವಲು ನಾವು ಬಿಡೋದಿಲ್ಲ ಅಂತ ಪಟ್ಟು ಹಿಡಿದು ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ.
ರಾಜಕಾಲುವೆ ಒತ್ತುವರಿಯಾಗಿದೆ ಎನ್ನಲಾದ ಜಾಗದಲ್ಲಿ ಅಧಿಕಾರಿಗಳು ಮಾರ್ಕ್ ಮಾಡಿದ್ದ ಕಾರಣ ಜೆಸಿಬಿ ಕಾಲುವೆ ತೆಗೆಯಲು ಮುಂದಾಗುತ್ತಿದ್ದಂತೆ ಇಲ್ಲಿದ್ದ ಮನೆಯವರು ಜೆಸಿಬಿ ಚಾಲಕನ ವಿರುದ್ಧ ಆಕ್ರೋಶ ಹೊರ ಹಾಕಿದರು. ಅಲ್ಲದೆ ಕಳೆದ 20 ವರ್ಷಗಳಿಂದ ನಾವು ಇಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಅಂದಿನಿಂದ ಇಲ್ಲದ ಕೆರೆಯ ರಾಜಕಾಲುವೆ ಇದೀಗ ಯಾಕೆ ಬಂತು ಅಂತ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ಇನ್ನು, ಕೆರೆಗೆ ಬರುವ ರಾಜಕಾಲುವೆ ಎರಡು ಕಿಲೋ ಮೀಟರ್ ದೂರದಿಂದ ಒತ್ತುವರಿಯಾಗಿದ್ದು, ಮೊದಲು ಅಲ್ಲಿ ಒತ್ತುವರಿ ತೆರವುಗೊಳಿಸಿಕೊಂಡು ಬನ್ನಿ ಅಂದರು. ಇನ್ನು, ಪಟ್ಟಣದಲ್ಲಿ ರಾಜಕಾಲುವೆ ಒತ್ತುವರಿಯಾಗಿದ್ದರು ತೆರವುಗೊಳಿಸದ ಅಧಿಕಾರಿಗಳು ರಾಜಕೀಯ ಪ್ರೇರಣೆಯಿಂದ ನಮ್ಮ ಮನೆ ಒಡೆಯಲು ಬಂದಿದ್ದಾರೆ ಅಂತ ಆರೋಪಿಸಿ ಗಲಾಟೆ ಮಾಡಿದ್ದಾರೆ. ಒತ್ತುವರಿ ತೆರವಿನ ಬಗ್ಗೆ ವಾಗ್ವಾದ ನಡೆದ ನಂತರ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಮನೆಯವರಿಗೆ ಎರಡು ದಿನಗಳ ಕಾಲಾವಕಾಶ ನೀಡಿದ್ದಾರೆ. ಆದರೆ ಈ ಒತ್ತುವರಿ ತೆರವು ಕಾರ್ಯ ಕೇವಲ ಕೆಲವರ ಜಮೀನಿಗೆ ಮಾತ್ರ ಸೀಮಿತವಾಗುತ್ತಾ ಇಲ್ಲ, ಸಂಪೂರ್ಣ ರಾಜಕಾಲುವೆ ಒತ್ತುವರಿ ತೆರವುಗೊಳಿಸುತ್ತಾರ ಎಂಬುದು ಪ್ರಶ್ನೆಯಾಗಿದೆ.