ಬೆಂಗಳೂರು: ರೈಲಿನಲ್ಲಿ ಗೌಪ್ಯವಾಗಿ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನ ಮಹಿಳಾ ತಂಡ 3.2 ಕೋಟಿ ರೂ. ಮೌಲ್ಯದ 640 ಗ್ರಾಂ ಕ್ರಿಸ್ಟಲ್ ಮೆಥಾಂಫೆಟಮೈನ್ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಒಡಿಶಾ ಮೂಲದ 44 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ 3.2 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ - ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ 3.2 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಪೊಲೀಸ್
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಒಡಿಶಾದ ಭುವನೇಶ್ವರಕ್ಕೆ ಅಕ್ಟೋಬರ್ 1 ರಂದು 1:50ಕ್ಕೆ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು 3.2 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಶಾಂತಿ ಎಕ್ಸ್‌ಪ್ರೆಸ್ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ವಶಕ್ಕೆ ಪಡೆದಿರುವ ಮಾದಕ ವಸ್ತುವನ್ನು 'ಐಸ್ ' ಅಥವಾ 'ಗ್ಲಾಸ್' ಎಂದೂ ಕರೆಯಲ್ಪಡುವ ಜನಪ್ರಿಯ ಪಾರ್ಟಿ ಡ್ರಗ್ ಹೆಚ್ಚು ವ್ಯಸನಕಾರಿ ಮತ್ತು ಕೇಂದ್ರ ನರಮಂಡಲದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಪೊಲೀಸರು ತಿಳಿಸಿದ್ದಾರೆ.
ಆರ್‌ಪಿಎಫ್ ಮಹಿಳಾ ತಂಡ ಕಾರ್ಯಾಚರಣೆ
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಒಡಿಶಾದ ಭುವನೇಶ್ವರಕ್ಕೆ ಅಕ್ಟೋಬರ್ 1 ರಂದು 1:50ಕ್ಕೆ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲು ಹೊರಟಿತ್ತು. ಈ ವೇಳೆ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ವಿಶೇಷವಾಗಿ ರಚಿಸಲಾದ ಆರ್‌ಪಿಎಫ್ ಶಕ್ತಿ ಘಟಕದ ಆರು ಸದಸ್ಯರ ತಂಡವು ಗಸ್ತು ತಿರುಗುತ್ತಿತ್ತು. ಈ ವೇಳೆ ಆರೋಪಿ ಅನುಮಾನಸ್ಪದ ರೀತಿಯಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಎಎಸ್‌ಐ ಎನ್‌ಪಿ ತನುಜ ತಮ್ಮ ತಂಡಕ್ಕೆ ಅನುಮಾನಸ್ಪದ ವ್ಯಕ್ತಿ ಬಗ್ಗೆ ತಿಳಿಸಿ ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಹೇಳಿದ್ದಾರೆ.
ಆರ್‌ಪಿಎಫ್ ತಂಡ ಸುತ್ತುವರಿಯುತ್ತಿರುವುದನ್ನು ಅರಿತ ಆರೋಪಿ ಹಿಂದೂಪುರ ನಿಲ್ದಾಣವನ್ನು ತಲುಪಿದ ತಕ್ಷಣ ರೈಲಿನಿಂದ ಕೆಳಗಿಳಿದು ಪೊಲೀಸರಿಗೆ ವಿರುದ್ಧ ದಿಕ್ಕಿನಲ್ಲಿ ಹೋಗಲು ಆರಂಭಿಸಿದ್ದ. ಈ ವೇಳೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ತನುಜ ನೇತೃತ್ವದ ಮಹಿಳಾ ತಂಡ ಆರೋಪಿ ಬೆನ್ನತ್ತಿ ಬಂಧಿಸಿ ಯಶವಂತಪುರಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಸಹಾಯಕ ಭದ್ರತಾ ಆಯುಕ್ತ ಶಮಂತ್, ಇನ್ಸ್‌ಪೆಕ್ಟರ್ ಎ.ಕೆ.ತಿವಾರಿ ಆರೋಪಿಯನ್ನು ಪರಿಶೀಲಿಸಿ 640 ಗ್ರಾಂ ಕ್ರಿಸ್ಟಲ್ ಮೆಥಾಂಫೆಟಮೈನ್ ಪತ್ತೆ ಹಚ್ಚಿದ್ದಾರೆ.
ಅದೇ ದಿನ ಪ್ರಶಾಂತಿ ಎಕ್ಸ್‌ಪ್ರೆಸ್‍ನಲ್ಲೇ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಪತ್ತೆಹಚ್ಚಿರುವ ಎಎಸ್‍ಐ ತನುಜ, 480 ವಿಸ್ಕಿ ಬಾಟಲಿಗಳುಳ್ಳ ನಾಲ್ಕು ಬ್ಯಾಗ್‍ಗಳನ್ನು ಜಪ್ತಿ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿದ್ದು, ಮದ್ಯದ ಬಾಟಲಿಗಳನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.