ಕರ್ನಾಟಕ

karnataka

By

Published : Aug 14, 2021, 2:54 AM IST

Updated : Aug 14, 2021, 3:46 AM IST

ETV Bharat / crime

ಪಂಜಾಬಿ ದಂಪತಿಯಿಂದ ನಕಲಿ ಅಂಕಪಟ್ಟಿ ಮಾರಾಟ ಕೇಸ್‌; ಇದೇ ಮಾರ್ಕ್ಸ್‌ ಕಾರ್ಡ್‌ನಿಂದ ಸರ್ಕಾರಿ ನೌಕರಿ..!

ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಪಿಯುಸಿ ಪಾಸ್ ಅಥವಾ ಫೇಲ್ ಆದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ದಂಪತಿಯಿಂದ ಬಗೆದಷ್ಟು ಮಾಹಿತಿ ಹೊರ ಬರುತ್ತಿದೆ. ಇವರು ನೀಡಿರುವ ಈ ನಕಲಿ ಅಂಕಪಟ್ಟಿಗಳನ್ನೇ ಬಳಸಿ ಕೆಲವರು ಖಾಸಗಿ ಹಾಗೂ ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Punjabi couple making and selling fake scorecards case in bangalore
ಪಂಜಾಬಿ ದಂಪತಿಯಿಂದ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಕೇಸ್‌; ಇದೇ ಮಾರ್ಕ್ಸ್‌ ಕಾರ್ಡ್‌ನಿಂದ ಕೆಲವರಿಗೆ ಸರ್ಕಾರಿ ನೌಕರಿ..!

ಬೆಂಗಳೂರು:ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಪಂಜಾಬಿ ದಂಪತಿಯ ಜಾಲ ಬಗೆದಷ್ಟು ಆಳ ಅಗಲ ಕಾಣಿಸುತ್ತಿದ್ದು, ದಂಪತಿ ಜೊತೆಗೆ ಇನ್ನೂ ಹೆಚ್ಚಿನ ಜನ ತಲೆಮಾರಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಪಿಯುಸಿ ಪಾಸ್ ಅಥವಾ ಫೇಲ್ ಆದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಶುಕ್ರವಾರ ಬೆಳಗ್ಗೆ ಬಂಧಿಸಿದ್ದರು. ಪಂಜಾಬ್‌ನಿಂದ ಬಂದು ಪೀಣ್ಯದಲ್ಲಿ ನೆಲೆಸಿದ್ದ ಮುಖೇಶ್ ಹಾಗೂ ರೋಹಿ ಎಂಬ ಬಂಧಿತ ಆರೋಪಿಗಳಿಂದ ನೂರಾರು ನಕಲಿ ಅಂಕಪಟ್ಟಿ, ಸೀಲ್‍ಗಳು ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ ದಂಪತಿ, ಪೀಣ್ಯ ಬಳಿ ಶೈಕ್ಷಣಿಕ ಸಂಸ್ಥೆಯೊಂದನ್ನು ತೆರೆದಿದ್ದರು. ಐಟಿಐ ಹಾಗೂ ಇತರೆ ಕೋರ್ಸ್‍ಗಳಿಗೆ ತರಬೇತಿ ನೀಡುವುದಾಗಿ ಹೇಳುತ್ತಿದ್ದರು. ಆದರೆ ರಾಜ್ಯ, ಹೊರ ರಾಜ್ಯದ ಪ್ರತಿಷ್ಠಿತಿ ವಿಶ್ವವಿದ್ಯಾಲಯಗಳಿಂದ ಪರೀಕ್ಷೆ ಬರೆಯದ, ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ ಹೆಸರುಗಳಲ್ಲಿ ನಕಲಿ ಪದವಿ ಪ್ರಮಾಣ ಪತ್ರ ಹಾಗೂ ನಕಲಿ ಅಂಕಪಟ್ಟಿಗಳನ್ನು ನೀಡುತ್ತಿದ್ದ ವಿಚಾರ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ಪಿಯುಸಿ ಉತ್ತೀರ್ಣರಾದ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಪರೀಕ್ಷೆ ಬರೆಯದೇ ಅಂಕಪಟ್ಟಿ ನೀಡುವುದಾಗಿ ಹೇಳುತ್ತಿದ್ದರು. ಕೇವಲ ನಾಲ್ಕು ತಿಂಗಳ ಅವಧಿಯಲ್ಲೇ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಬಿ.ಟೆಕ್, ಎಂ.ಟೆಕ್, ಎಂ.ಬಿ.ಎ, ಬಿ.ಕಾಮ್ ಹಾಗೂ ಇತರೆ ಕೋರ್ಸ್‍ಗಳ ನಕಲಿ ಅಂಕಪಟ್ಟಿಗಳನ್ನು ನೀಡುತ್ತಿದ್ದರು.

ಈ ರೀತಿ ನಕಲಿ ಪ್ರಮಾಣಪತ್ರ ಹಾಗೂ ಅಂಕಪಟ್ಟಿಯನ್ನು ಸಾವಿರದಿಂದ ಲಕ್ಷಾಂತರ ರೂಪಾಯಿ ಪಡೆದು ಮಾರುತ್ತಿದ್ದರು. ರಾಜ್ಯ ಹಾಗೂ ಹೊರ ರಾಜ್ಯದ 500ಕ್ಕೂ ಹೆಚ್ಚು ಮಂದಿ ಅಂಕಪಟ್ಟಿ ಖರೀದಿಸಿದ್ದಾರೆ ಎನ್ನಲಾಗಿದೆ. ಅದೇ ಅಂಕಪಟ್ಟಿ ಬಳಸಿ ಹಲವರು ಖಾಸಗಿ ಹಾಗೂ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದೂ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ಬಯಲು: ಪಂಜಾಬ್ ಮೂಲದ ದಂಪತಿ ಅರೆಸ್ಟ್‌

ಮನೆ, ಕಚೇರಿ ಮೇಲೆ ದಾಳಿ

ವಿಶ್ವವಿದ್ಯಾಲಯದ ನಕಲಿ ಪ್ರಮಾಣಪತ್ರ, ನಕಲಿ ಅಂಕಪಟ್ಟಿ ತಯಾರಿಸುತ್ತಿರುವ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸಿಸಿಬಿ ಪೊಲೀಸರು ಆರೋಪಿಗಳಿಗೆ ಸೇರಿದ ಮನೆ, ಕಚೇರಿ ಸೇರಿ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ನಕಲಿ ಅಂಕಪಟ್ಟಿಗಳು ಪತ್ತೆಯಾಗಿವೆ. ವಿವಿ ನಕಲಿ ಪ್ರಮಾಣ ಪತ್ರ, ಅಂಕಪಟ್ಟಿ, ಆರೋಪಿಗಳಿಗೆ ಸಂಬಂಧಿಸಿದ ಆಸ್ತಿ ದಾಖಲೆ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಸೀಲ್, ಕಂಪ್ಯೂಟರ್ ವಶಪಡಿಸಿಕೊಂಡಿದ್ದಾರೆ.

ಸಿ.ವಿ. ರಾಮನ್ ವಿಶ್ವವಿದ್ಯಾಲಯ, ರವೀಂದ್ರನಾಥ್ ಠಾಗೋರ್ ವಿಶ್ವವಿದ್ಯಾಲಯ, ಅಸೆಟ್ ವಿಶ್ವವಿದ್ಯಾಲಯ ಸೇರಿ ಹಲವು ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿಗಳು ಆರೋಪಿಗಳ ಬಳಿ ಸಿಕ್ಕಿವೆ. ಈ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೂ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಅಂಕಪಟ್ಟಿ ತಯಾರಿಕೆ ಪ್ರಕರಣದಲ್ಲಿ ಆರೋಪಿಗಳ ಜೊತೆಗೆ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಇದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದೂ ಕೇಂದ್ರ ತನಿಖಾ ತಂಡ ದ ಪೊಲೀಸರು ತಿಳಿಸಿದ್ದಾರೆ.

Last Updated : Aug 14, 2021, 3:46 AM IST

ABOUT THE AUTHOR

...view details