ಕಾರವಾರ (ಉ.ಕ): ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಕಳೆದ ಐದಾರು ತಿಂಗಳಿಂದ ಸರಣಿ ಕಳ್ಳತನಗಳದ್ದೇ ಸುದ್ದಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳು, ಹೆದ್ದಾರಿಯಂಚಿನ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡುವ ಖದೀಮರು ಕಳ್ಳತನ ಎಸಗಿ ಪರಾರಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಪೊಲೀಸ್ ಇಲಾಖೆ ಖದೀಮರನ್ನು ಸದೆಬಡಿಯಲು ಪ್ರಯತ್ನಿಸುತ್ತಿದೆಯಾದರೂ ಕಳ್ಳರು ಮಾತ್ರ ತಲೆಮರೆಸಿಕೊಂಡು ತಿರುಗಾಡುತ್ತಿದ್ದು, ಪೊಲೀಸರ ತಲೆನೋವಿಗೆ ಕಾರಣವಾಗಿದೆ. ಜಿಲ್ಲೆಯ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಕಳ್ಳತನ ಪ್ರಕರಣ ವರದಿಯಾಗುತ್ತಿವೆ.
ವಾರಕ್ಕೆ 2-3ರಂತೆ ಕಳ್ಳತನ, ದರೋಡೆ ಪ್ರಕರಣಗಳು ದಾಖಲಾಗುತ್ತಿದ್ದು ಹೆದ್ದಾರಿಗೆ ಹೊಂದಿಕೊಂಡಿರುವ ಊರುಗಳ ಹಾಗೂ ಒಂಟಿ ಮನೆಯಲ್ಲಿ ವಾಸವಾಗಿರುವವರು ಆತಂಕದಲ್ಲೇ ದಿನಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊರಜಿಲ್ಲೆಯ ಕಳ್ಳರ ಗುಂಪು ಸದ್ದಿಲ್ಲದೇ ಹೆದ್ದಾರಿ ಆಸುಪಾಸಿನ ಊರುಗಳಲ್ಲಿ ತಿರುಗಾಡಿ ಕೈಚಳಕ ತೋರಿಸುತ್ತಿರುವ ಅನುಮಾನ ಸಹ ವ್ಯಕ್ತವಾಗಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಅನ್ನೋದು ಸ್ಥಳೀಯರ ಒತ್ತಾಯವಾಗಿದೆ.