ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಹತ್ತು ದಿನಗಳ ಕಾಲದ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.
ಆಗಸ್ಟ್ 24ರಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿಯ ಮೇಲೆ ತಮಿಳುನಾಡು ಮೂಲದ ಏಳು ಮಂದಿ ಸಾಮೂಹಿಕ ಅತ್ಯಾಚಾರ ಮಾಡಿ ತಲೆ ಮರೆಸಿಕೊಂಡಿದ್ದು, ಅದರಲ್ಲಿ ಆರು ಜನರನ್ನು ಪೊಲೀಸರು ಬಂಧಿಸಿ, ವಿಚಾರಣೆ ಹಾಗೂ ಸ್ಥಳ ಮಹಜರು ನಡೆಸಿದ್ದರು. ಆನಂತರ ನಗರದ ಮೂರನೇ ಜೆಎಂಎಫ್ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹತ್ತು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದರು. ಈ ಕಾಲಾವಕಾಶ ಇಂದಿಗೆ ಮುಗಿಯಲಿದ್ದು, ಇಂದು ಆರು ಜನ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
ಏಳನೇ ಆರೋಪಿ ಬಂಧನ?
ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮೊದಲು ಪೊಲೀಸರು ಐದು ಆರೋಪಿಗಳನ್ನು ಬಂಧಿಸಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಪ್ರಕರಣದಲ್ಲಿ ಏಳು ಜನ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಆನಂತರ ತಮಿಳುನಾಡಿನ ತಿರುಪ್ಪೂರಿನ ಬಳಿಯ ಗ್ರಾಮವೊಂದರಲ್ಲಿ ಆರನೇ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕಾಗಿ ಮೈಸೂರು ಪೊಲೀಸರು ತಮಿಳುನಾಡಿನಲ್ಲಿದ್ದು, ಏಳನೇ ಆರೋಪಿಯನ್ನು ನಿನ್ನೆ ಬಂಧಿಸಲಾಗಿದೆ ಎಂಬ ಪೊಲೀಸ್ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಯಾವುದೇ ಖಚಿತ ಮಾಹಿತಿಯನ್ನು ಪೊಲೀಸರು ನೀಡುತ್ತಿಲ್ಲ. ಆದರೂ ಮೂಲಗಳ ಪ್ರಕಾರ ಗ್ಯಾಂಗ್ ರೇಪ್ ಪ್ರಕರಣದ ಏಳನೇ ಆರೋಪಿಯನ್ನು ಬಂಧಿಸಲಾಗಿದೆ ಎನ್ನಲಾಗಿದೆ.