ಕರ್ನಾಟಕ

karnataka

ETV Bharat / crime

ಮುಂಬೈನಲ್ಲಿ ಇಡ್ಲಿ ಮಾರಾಟ, ಬೆಂಗಳೂರಲ್ಲಿ ಸರಗಳ್ಳತನ.. ಖತರ್ನಾಕ್​ ದರೋಡೆ ಗ್ಯಾಂಗ್ ಅರೆಸ್ಟ್ - ಬೆಂಗಳೂರು ಸುದ್ದಿ

ಮುಂಬರುವ ಗಣೇಶ ಹಬ್ಬದ ಸಂದರ್ಭದಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದ ಮುಂಬೈ ಮೂಲದ ಕಳ್ಳರ ಗ್ಯಾಂಗ್‌ ಅನ್ನು ಬಂಧಿಸುವಲ್ಲಿ ಬೆಂಗಳೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 6.2 ಲಕ್ಷ ರೂಪಾಯಿ ಮೌಲ್ಯದ 139 ಗ್ರಾಂ ಚಿನ್ನ ಹಾಗೂ ಕೆಟಿಎಂ ಬೈಕ್ ಜಪ್ತಿ ಮಾಡಲಾಗಿದೆ.

Mumbai resident chain snatchers arrested in bangalore
ಮುಂಬೈನಲ್ಲಿ ಇಡ್ಲಿ ಮಾರಿ ಬೆಂಗಳೂರಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

By

Published : Sep 7, 2021, 5:00 PM IST

Updated : Sep 7, 2021, 5:10 PM IST

ಬೆಂಗಳೂರು: ಮುಂಬೈನಲ್ಲಿ ಬೀದಿ ಬದಿ ಇಡ್ಲಿ ಮಾರಾಟ ಮಾಡಿ 18 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಗ್ಯಾಂಗ್‌, ಜಾಮೀನಿನ‌ ಮೇಲೆ ಹೊರ ಬಂದು ಬೆಂಗಳೂರಿನಲ್ಲಿ ಸರಗಳ್ಳತನ ಮಾಡುತ್ತಿದ್ದಾಗ ಸಂಜಯ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಮುಂಬೈನ ಮ್ಯಾಕ್ಸ್ ಪ್ರಸನ್ನ, ಮೊಹಮ್ಮದ್ ತಾರೀಖ್ ಹಾಗೂ ಜಮೀಲ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 6.2 ಲಕ್ಷ ರೂಪಾಯಿ ಮೌಲ್ಯದ 139 ಗ್ರಾಂ ಚಿನ್ನಾಭರಣ ಹಾಗೂ ಕೆಟಿಎಂ ಬೈಕ್ ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ‌. ಪ್ರಕರಣದಲ್ಲಿ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ‌.

ಪ್ರಮುಖ ಆರೋಪಿ ಮ್ಯಾಕ್ಸ್ ಪ್ರಸನ್ನ ಕೆಲ ವರ್ಷಗಳ ಹಿಂದೆ ಮುಂಬೈನ ಪಾದಚಾರಿ ಮಾರ್ಗದಲ್ಲಿ ಇಡ್ಲಿ ಮಾರಾಟ ಮಾಡುತ್ತಿದ್ದ. ಕೆಲ ದಿನಗಳ ಬಳಿಕ ಏರ್‌ಲೈನ್ ಕ್ಯಾಂಟಿನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಲಾಕ್‌ಡೌನ್ ಹಿನ್ನೆಲೆ ಈತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಹಣ ಸಂಪಾದನೆಗಾಗಿ ವಾಮಮಾರ್ಗ ತುಳಿದ ಮ್ಯಾಕ್ಸ್ ಇದಕ್ಕಾಗಿ ಮುಂಬೈನಲ್ಲಿ‌‌ ಒಂಟಿಯಾಗಿ ಹೋಗುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಸರಗಳ್ಳತನ ಮಾಡುತ್ತಿದ್ದ. ಇದಕ್ಕೆ‌ ಈತನ ಸಹಚರರು ಸಾಥ್ ನೀಡಿದ್ದರು ಎನ್ನಲಾಗ್ತಿದೆ.

ಕಳ್ಳತನ ಮಾಡಿದ್ದ ಕೆಟಿಎಂ ಬೈಕ್‌ ಬಳಸಿ ಸರಗಳ್ಳತನ!

18 ಪ್ರಕರಣಗಳಲ್ಲಿ ಭಾಗಿಯಾಗಿ ಮ್ಯಾಕ್ಸ್‌ ಜೈಲುಪಾಲಾಗಿದ್ದ. ಜಾಮೀನು ಪಡೆದು ಹೊರಬಂದು ಕಳೆದ ಮಾರ್ಚ್‌ನಲ್ಲಿ ಬೆಂಗಳೂರಿಗೆ ಬಂದಿದ್ದಾನೆ. ಇಲ್ಲಿನ ಏರಿಯಾಗಳಲ್ಲಿ ಸುತ್ತಾಡಿ ಸರಗಳ್ಳತನ ಮಾಡಿ ಹೆಚ್ಚು ಹಣ ಸಂಪಾದಿಸಬಹುದು ಎಂದು ಆಲೋಚಿಸಿ ಮುಂಬೈನಲ್ಲಿದ್ದ ಸಹಚರರಿಗೆ ಫೋನ್ ಮಾಡಿ ಕರೆಯಿಸಿಕೊಂಡಿದ್ದಾನೆ. ಇದಕ್ಕೂ‌‌ ಮುನ್ನ ನಗರದಲ್ಲಿ ಪರಿಚಿತರಾಗಿದ್ದ ಸಹಚರರಿಂದ ಕೆಟಿಎಂ ಬೈಕ್ ಕಳ್ಳತನ ಮಾಡಿಸಿದ್ದ. ಬಳಿಕ ಅದೇ ಬೈಕ್‌ನಲ್ಲಿ ಇಬ್ಬರು ಆರೋಪಿಗಳು ಕಳೆದ‌ ತಿಂಗಳು 17ರಂದು ಡಾಲರ್ಸ್ ಕಾಲೋನಿ ಬಳಿ ನಡೆದುಕೊಂಡು ಹೋಗುತ್ತಿದ್ದ ಜಯಮ್ಮ ಎಂಬುವರನ್ನು ಟಾರ್ಗೆಟ್ ಮಾಡಿಕೊಂಡು ಹಿಂಬದಿಯಿಂದ ತೆರಳಿ ಮಾಂಗಲ್ಯ ಸರ ಕಳ್ಳತನ ಮಾಡಿದ್ದರು‌.‌ ಮಾಹಿತಿ ಆಧರಿಸಿ ಸಂಜಯನಗರ ಇನ್‌ಸ್ಪೆಕ್ಟರ್ ಬಾಲರಾಜು ನೇತೃತ್ವದ ತಂಡ ತಾಂತ್ರಿಕ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ‌.

ಕಳೆದ ಮಾರ್ಚ್‌ನಲ್ಲಿ‌ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಬಿಟಿಎಂ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬಂಧಿತರ ವಿರುದ್ಧ ಸಂಜಯ ನಗರ, ಅಮೃತಹಳ್ಳಿ, ಆರ್.ಟಿ.ನಗರದಲ್ಲಿ ದಾಖಲಾಗಿದ್ದ ವಿವಿಧ 5 ಅಪರಾಧ ಪ್ರಕರಣಗಳನ್ನು ಬೇಧಿಸಲಾಗಿದೆ.

ಗಣೇಶೋತ್ಸವ ವೇಳೆ ಸರಗಳ್ಳತನಕ್ಕೆ ಹಾಕಿದ್ರು ಸ್ಕೆಚ್!

ಪ್ರಕರಣ ಎರಡನೇ ಆರೋಪಿ ಮೊಹಮ್ಮದ್ ತಾರೀಖ್ ಉತ್ತರ ಪ್ರದೇಶದ ಲಖನೌ ಮೂಲದವನಾಗಿದ್ದಾನೆ‌. ಕೆಲ ವರ್ಷಗಳ ಹಿಂದೆ ಈತ ದುಬೈನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಪ್ರಮುಖ ಆರೋಪಿ ಜೊತೆ ಕೈ ಜೋಡಿಸಿ ಕಳ್ಳತನ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಮುಂಬರುವ ಗಣೇಶ ಹಬ್ಬದ ವೇಳೆ ಸರಗಳ್ಳತನ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ: ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರ ಎಗರಿಸುತ್ತಿದ್ದ ಗ್ಯಾಂಗ್ ಅರೆಸ್ಟ್​

Last Updated : Sep 7, 2021, 5:10 PM IST

ABOUT THE AUTHOR

...view details