ಮುಂಬೈ: 21 ವರ್ಷದ ಚಿಕ್ಕ ವಯಸ್ಸಿನ ಮಾಡೆಲ್ ಒಬ್ಬರನ್ನು ದೊಡ್ಡ ಸ್ಟಾರ್ ಜೊತೆ ಎರಡು ಚಿತ್ರಗಳಲ್ಲಿ ನಟಿಸುವ ಅವಕಾಶ ನೀಡುತ್ತೇವೆ ಎಂದು ವಂಚಿಸಿರುವ ಘಟನೆ ದೇಶದ ವಾಣಿಜ್ಯ ನಗರಿಯಲ್ಲಿ ನಡೆದಿದೆ.
ಇಬ್ಬರು ನಿರ್ಮಾಪಕರೆಂದು ಹೇಳಿಕೊಂಡು ಮಾಡೆಲ್ಗೆ 10 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಇಬ್ಬರು ಆರೋಪಿಗಳಾದ ಪಿಯೂಷ್ ಜೈನ್ ಮತ್ತು ಮಂಥನ್ ರೂಪಾರೆಲೆ ವಿರುದ್ಧ ದಹಿಸರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಯುವತಿ ದೂರಿನಲ್ಲಿ ಹೇಳಿರುವುದೇನು?:ದೂರುದಾರರು ಮುಂಬೈ ಮಹಾನಗರದಲ್ಲಿ ಮಾಡೆಲಿಂಗ್ ಮಾಡುತ್ತಿದ್ದು, ಬಾಲಿವುಡ್ ಚಿತ್ರಗಳಲ್ಲಿ ಪಾತ್ರಕ್ಕಾಗಿ ಎದುರು ನೋಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ನಿರ್ಮಾಪಕರು ಯುವತಿಗೆ ವಂಚನೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಜೈನ್ ಮತ್ತು ರೂಪಾರೆಲೆ ತಮ್ಮನ್ನು ಚಲನಚಿತ್ರ ನಿರ್ಮಾಣ ಕಂಪನಿಯ ಮಾಲೀಕರೆಂದು ಹೇಳಿಕೊಂಡಿದ್ದರು. RC-15 ಮತ್ತು ಜೈಲರ್ ಎಂಬ ಶೀರ್ಷಿಕೆಯ ಎರಡು ಚಲನಚಿತ್ರಗಳನ್ನು ನಿರ್ಮಿಸುತ್ತಿರುವುದಾಗಿ ಯುವತಿಗೆ ನಂಬಿಸಿದ್ದರು. ಅಷ್ಟೇ ಅಲ್ಲ ದಕ್ಷಿಣ ಭಾರತದ ಮೆಗಾ ಸ್ಟಾರ್ ಮಗಳಾಗಿ ನಟಿಸಲಿದ್ದಾರೆ ಎಂದು ಮಾಡೆಲ್ಗೆ ನಂಬಿಕೆ ಹುಟ್ಟಿಸಿದ್ದರು.