ಮಾಲ್ಡಾ (ಪಶ್ಚಿಮ ಬಂಗಾಳ): 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕನೊಬ್ಬ ಹೆತ್ತ ತಂದೆ-ತಾಯಿ, ಅಕ್ಕ-ಅಜ್ಜಿಯನ್ನು ಕೊಲೆ ಮಾಡಿ, ಮನೆಯ ಆವರಣದಲ್ಲೇ ಅವರನ್ನು ಹೂತಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ. ಫೆಬ್ರವರಿಯಲ್ಲೇ ಘಟನೆ ನಡೆದಿದ್ದು, ನಾಲ್ಕು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ಪ್ರಕರಣ ಹಿನ್ನೆಲೆ
ಮಾಲ್ಡಾದ ಬಿರ್‌ನಗರದಲ್ಲಿ ವಾಸವಾಗಿರುವ ಜವಾದ್ ಅಲಿ (53) ಕೃಷಿಯೊಂದಿಗೆ ಇತರ ವ್ಯವಹಾರಗಳನ್ನು ನಡೆಸುತ್ತಿದ್ದರು. ಇವರೊಂದಿಗೆ ಇವರ ಪತ್ನಿ, ಇಬ್ಬರು ಗಂಡು ಮಕ್ಕಳು, ಓರ್ವ ಮಗಳು ಹಾಗೂ ತಾಯಿ ವಾಸವಾಗಿದ್ದರು. ಹಿರಿಯ ಮಗ ಆಸಿಫ್ ಮೆಹಬೂಬ್ (17) ಕೆಲ ತಿಂಗಳ ಹಿಂದೆ ಮನೆ ಬಿಟ್ಟು ಹೊರಗಡೆ ಹೋಗಿದ್ದಾನೆ. ಬಳಿಕ ತಂದೆಗೆ ಕರೆ ಮಾಡಿ ಆಗಾಗ ಹಣ ಕೇಳುತ್ತಿದ್ದನು. ಮಗ ಕೇಳಿದಾಗೆಲ್ಲಾ ಅಪ್ಪ ಅವನ ಬ್ಯಾಂಕ್ ಖಾತೆಗೆ ಹಣ ಹಾಕುತ್ತಿದ್ದರು. ಈತ ಬೇರೆ ಬೇರೆ ಸ್ಥಳಗಳಲ್ಲಿ ತಂಗುತ್ತಾ, ಮೊಬೈಲ್ ಸಿಮ್ ಕಾರ್ಡ್ಗಳನ್ನು ಬದಲಾಯಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮ, ಅಕ್ಕ-ಅಜ್ಜಿಯನ್ನ ಕೊಂದ ಬಾಲಕ ಅನೇಕ ದಿನಗಳ ಬಳಿಕ ಆಸಿಫ್ ಮೆಹಬೂಬ್ ಮನೆಗೆ ಹಿಂದಿರುಗಿದ್ದು, ಗ್ಯಾಜೆಟ್‌ಗಳನ್ನು ಖರೀದಿಸಲು ಹಣ ನೀಡುವಂತೆ ತಂದೆಗೆ ಒತ್ತಡ ಹೇರಲು ಪ್ರಾರಂಭಿಸಿದ್ದಾನೆ. ಇವನ ನಡವಳಿಕೆಯಲ್ಲಿ ವ್ಯತ್ಯಾಸ ಕಂಡರೂ ಯಾರೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಜವಾದ್ ಅಲಿ ಅವರು ತಮ್ಮ ಪೂರ್ವಜರ ಆಸ್ತಿಯನ್ನು ಮಾರಾಟ ಮಾಡಿದ ಬೆನ್ನಲ್ಲೇ ಹಣಕ್ಕಾಗಿ ಆಸಿಫ್ ದುಷ್ಕೃತ್ಯ ಎಸಗಿದ್ದಾನೆ. ಕುಟುಂಬದ ನಾಲ್ವರನ್ನು ಕೊಲೆ ಮಾಡಿದ್ದು, ಕಿರಿಯ ಮಗ ಪಾರಾಗಿದ್ದನು. ವಿಷಯ ತಿಳಿದಿದ್ದರೂ ಅಣ್ಣ ತನ್ನನ್ನೂ ಕೊಲೆ ಮಾಡುತ್ತಾನೆಂಬ ಭಯದಿಂದ ಸುಮ್ಮನಿದ್ದನು.
ಇದನ್ನೂ ಓದಿ: ತನ್ನ ಪಾಳು ಬಿದ್ದ ಮನೆಯಲ್ಲಿ 'ಚಿತೆ' ಮಾಡಿ ತಾನೇ ಕೊಳ್ಳಿ ಇಟ್ಟುಕೊಂಡ ರೈತ!
ಆದರೆ ಎರಡು ದಿನದ ಹಿಂದೆ ಧೈರ್ಯ ಮಾಡಿ ಪೊಲೀಸ್ ಠಾಣೆಗೆ ತೆರಳಿ ನಡೆದ ದುರಂತವನ್ನು ಹೇಳಿ, ಅಣ್ಣ ಆಸಿಫ್ ವಿರುದ್ಧ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸಿಫ್ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.