ಬೆಂಗಳೂರು :ಬಸವನಗುಡಿ ಠಾಣಾ ವ್ಯಾಪ್ತಿಯ ರಾಮಕೃಷ್ಣ ಆಶ್ರಮ ಬಳಿಯ ಡಾಮಿನೋಸ್ ಪಿಜ್ಜಾ ಹಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಮ್ಯಾನೇಜರ್ ಹಲ್ಲೆ ನಡೆಸಿರುವ ಘಟನೆ 3 ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ಪಿಜ್ಜಾ ಹಟ್‌ನಲ್ಲಿ ಕೆಲಸ ಮಾಡ್ತಿದ್ದ ಯುವತಿ ಮೇಲೆ ಮ್ಯಾನೇಜರ್‌ನಿಂದ ಕಪಾಳಮೋಕ್ಷ : ವಿಡಿಯೋ ವೈರಲ್ ಯುವತಿ ಮೇಲೆ ಹಲ್ಲೆ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಿಂದ ಎಚ್ಚೆತ್ತ ಬಸವನಗುಡಿ ಪೊಲೀಸರು ಘಟನೆ ಬಗ್ಗೆ ಮಾಹಿತಿ ಕೋರಿ ಯುವತಿಗೆ ನೋಟಿಸ್ ನೀಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪಿಜ್ಜಾ ಹಟ್ ಮ್ಯಾನೇಜರ್ ಪುರುಷೋತ್ತಮ್ ಎಂದು ಹೇಳಲಾಗುತ್ತಿದೆ. ಆತ ಯುವತಿಯ ಕಪಾಳಕ್ಕೆ ಹೊಡೆದಿದ್ದಾನೆ. ಕಪಾಳಕ್ಕೆ ಹೊಡೆದ ರಭಸಕ್ಕೆ ಯುವತಿ ಕೆಳಗೆ ಬಿದ್ದಿದ್ದಾಳೆ. ಘಟನೆ ನಡೆದು ಮೂರು ತಿಂಗಳಾದರೂ ಯುವತಿ ತನ್ನ ಕೆಲಸ ಹೋಗುತ್ತೆ ಎಂಬ ಆತಂಕದಿಂದ ಪೊಲೀಸರಿಗೆ ದೂರು ನೀಡಿರಲಿಲ್ಲ ಎನ್ನಲಾಗಿದೆ.
ಮತ್ತೊಂದೆಡೆ ಸಂತ್ರಸ್ತೆಯನ್ನ ಲವ್ ಮಾಡುವಂತೆ ಮ್ಯಾನೇಜರ್ ಪೀಡಿಸುತ್ತಿದ್ದನಂತೆ. ಯುವತಿ ನಿರಾಕರಿಸಿ ಮತ್ತೊಬ್ಬ ಯುವಕನನ್ನ ಪ್ರೀತಿಸುತ್ತಿದ್ದಾಳೆ ಎಂದು ತಿಳಿದಿದ್ದಕ್ಕೆ, ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಬಸವನಗುಡಿ ಪೊಲೀಸರು ಆಕೆಗೆ ನೋಟಿಸ್ ನೀಡಿದ್ದು, ಮಾಹಿತಿ ನೀಡುವಂತೆ ತಿಳಿಸಿದ್ದಾರೆ.