ಫರಿದಾಬಾದ್, ಹರಿಯಾಣ:ಕೇವಲ 50 ರೂಪಾಯಿ ವಿಚಾರವಾಗಿ 18 ತಿಂಗಳ ಮಗುವನ್ನು ಬರ್ಬರ ಕೊಲೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹರಿಯಾಣದ ಫರಿದಾಬಾದ್ನಲ್ಲಿ ಈ ಕೃತ್ಯ ನಡೆದಿದ್ದು, ಪಕ್ಕದ ಮನೆಯ ಮಗುವನ್ನು ಕೊಂದು ನರೇಶ್ ಅಲಿಯಾಸ್ ಬಿನ್ನು ಸುಮಾರು ಆರು ತಿಂಗಳ ಹಿಂದೆ ಪರಾರಿಯಾಗಿದ್ದನು. ಈ ಪ್ರಕರಣದ ತನಿಖೆ ನಡೆಸಿದ್ದ ಹರಿಯಾಣದ ಅಪರಾಧ ವಿಭಾಗದ ಡಿಎಲ್ಎಫ್ ಟೀಂ ಭಾನುವಾರ ಆರೋಪಿಯನ್ನು ಬಂಧಿಸಿದೆ.
ಸುಮಾರು ಆರು ತಿಂಗಳ ಹಿಂದಿನ ಪ್ರಕರಣ ಇದಾಗಿದ್ದು, ಫರಿದಾಬಾದ್ನ ಸೆಕ್ಟರ್ 56ರ ಖೇಡಿ ಕಾಲಾ ಗ್ರಾಮದಲ್ಲಿ ಮಗುವಿನ ಕೊಲೆ ನಡೆದಿತ್ತು. ಈ ವಿಚಾರವನ್ನು ಬೆನ್ನತ್ತಿದ ಪೊಲೀಸರಿಗೆ ಕೇವಲ 50 ರೂಪಾಯಿ ವಿಚಾರವಾಗಿ ಕೊಲೆ ನಡೆದಿರುವುದಾಗಿ ತನಿಖೆ ನಂತರ ಗೊತ್ತಾಯಿತು.
8 ವರ್ಷದ ಮಗಳ ಬಳಿ 50 ರೂಪಾಯಿ ಕದ್ದು, 18 ತಿಂಗಳ ಮಗುವನ್ನು ಕೊಂದ..
ನರೇಶ್ ಅಲಿಯಾಸ್ ಬಿನ್ನು ಮಾದಕ ವ್ಯಸನಿಯಾಗಿದ್ದು, ನಿರುದ್ಯೋಗಿಯೂ ಆಗಿದ್ದನು. ಆತನ ಪಕ್ಕದ ಮನೆಯವನಾದ ಶಾ ಮಹಮದ್ ಎಂಬಾತನ ಕುಟುಂಬದ ಜೊತೆಗೆ ಆಗಾಗ ಕ್ಷುಲ್ಲಕ ವಿಚಾರಗಳಿಗೆ ಜಗಳವಾಡುತ್ತಿದ್ದನು. ಒಂದು ಬಾರಿ ತನ್ನ ಮಾದಕ ವ್ಯಸನ ಚಟಕ್ಕಾಗಿ ಶಾ ಮಹಮದ್ನ 8 ವರ್ಷದ ಮಗಳ ಬಳಿಯಿದ್ದ 50 ರೂಪಾಯಿಯನ್ನು ನರೇಶ್ ಕಳ್ಳತನ ಮಾಡಿದ್ದನು.
ಈ ವಿಚಾರ ಶಾ ಮಹಮದ್ನಿಗೆ ತಿಳಿದಿದ್ದು, ಈ ವಿಚಾರ ತಿಳಿದು ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದಾದ ನಂತರ ದ್ವೇಷ ಸಾಧಿಸಿದ ನರೇಶ್ ಮನೆ ಹೊರಗೆ ಆಟವಾಡುತ್ತಿದ್ದ 18 ತಿಂಗಳ ಮಗುವನ್ನು ಕೊಲ್ಲಲು ಸಂಚು ಹೂಡಿದ್ದಾನೆ.
ಯಾರಿಗೂ ಗೊತ್ತಾಗದಂತೆ ಮಗುವನ್ನು ತನ್ನ ಫ್ಲ್ಯಾಟ್ಗೆ ತೆಗೆದುಕೊಂಡು ಬಂದ ನರೇಶ್, ಟೆರೇಸ್ ಮೇಲಿನ ನೀರಿನ ಟ್ಯಾಂಕ್ನಲ್ಲಿ ಮುಳುಗಿಸಿ ಕೊಂದಿದ್ದಾನೆ. ನಂತರ ವೈರ್ನಿಂದ ಟ್ಯಾಂಕ್ ಅನ್ನು ಮುಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ.
ಇತ್ತ ಪೋಷಕರು ಮಗುವಿಗಾಗಿ ಹುಡುಕಾಟ ನಡೆಸಿದ್ದು, ಹತಾಶರಾಗಿದ್ದಾರೆ. ಕೆಲವು ದಿನಗಳ ನಂತರ ಮಗುವಿನ ಮೃತದೇಹ ಟ್ಯಾಂಕ್ನಲ್ಲಿರುವುದು ಪತ್ತೆಯಾಗಿದೆ. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು, ಆರೋಪಿ ನರೇಶ್ನನ್ನು ಫರಿದಾಬಾದ್ನಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಕೂಡಾ ತಪ್ಪನ್ನು ಒಪ್ಪಿಕೊಂಡಿದ್ದು, ತನಿಖೆ ಮುಂದುವರೆಯುತ್ತಿದೆ.
ಇದನ್ನೂ ಓದಿ: ಆಫ್ಘನ್ನ ರಾಯಭಾರ ಕಚೇರಿಯಲ್ಲಿ 200 ಭಾರತೀಯರು... ರಕ್ಷಣೆಗೆ ಧಾವಿಸಿದ ಏರ್ಫೋರ್ಸ್ ವಿಮಾನ