ನವದೆಹಲಿ: ಸುಮಾರು ಮೂರು ವರ್ಷಗಳ ನಂತರ ವ್ಯಕ್ತಿಯೊಬ್ಬರ ಸಾವಿನ ಪ್ರಕರಣ ಕುರಿತಂತೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೂರು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ದೆಹಲಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕಿದ್ದರು. ಇವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.
ಬಳಿಕ ನಡೆದ ಪೊಲೀಸ್ ಪ್ರಾಥಮಿಕ ವಿಚಾರಣೆ ವೇಳೆ ವ್ಯಕ್ತಿ ಉಸಿರಾಟದ ವೈಫಲ್ಯದಿಂದ ಮೃತಪಟ್ಟಿದ್ದರು ಎಂದು ಘೋಷಿಸಲಾಗಿತ್ತು. ಆದರೆ ಸಾವನ್ನಪ್ಪಿದ ಕುಟುಂಬದ ಸದಸ್ಯರು ಒಪ್ಪಲು ರೆಡಿ ಇರಲಿಲ್ಲ. ಹಾಗೂ ಈ ಸಂಬಂಧ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದೆ.
ಏನಿದು ಘಟನೆ?:ಫೆಬ್ರವರಿ 27, 2020 ರಂದು 45 ವರ್ಷದ ವ್ಯಕ್ತಿಯೊಬ್ಬರು ಖಜೂರಿ ಖಾಸ್ ಕೆಂಪು ದೀಪದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಆ ವ್ಯಕ್ತಿ ಸತ್ತಿದ್ದಾನೆ ಎಂದು ಘೋಷಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 174 ರ ಅಡಿ ಪ್ರಕ್ರಿಯೆಗಳನ್ನು ನಿಯಮಗಳಿಗೆ ಅನುಸಾರವಾಗಿ ನಡೆಸಲಾಗಿದೆ ಎಂದೂ ಪೊಲೀಸ್ ಅಧಿಕಾರಿ ಸ್ಪಷ್ಟನೆ ಕೊಟ್ಟಿದ್ದಾರೆ.
ಮಾರ್ಚ್ 11, 2020 ರಂದು ವೈದ್ಯಕೀಯ ಮಂಡಳಿಯು ಶವಪರೀಕ್ಷೆ ಕೂಡಾ ನಡೆಸಿತ್ತು. ಮಾರ್ಚ್ 19 ರಂದು ಮೃತರನ್ನು ಚಾಂದ್ ಬಾಗ್ ನಿವಾಸಿ ಮೊಹಮ್ಮದ್ ಮುಷ್ತಾಕ್ ಅವರ ಪುತ್ರ ಸಿಕಂದರ್ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಅವರ ಕುಟುಂಬಕ್ಕೆ ಅಂತಿಮ ವಿಧಿವಿಧಾನಗಳಿಗಾಗಿ ಹಸ್ತಾಂತರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.