ಕರ್ನಾಟಕ

karnataka

ETV Bharat / crime

ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿ ಮರಿ ಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆ: ಏಕೆ ಗೊತ್ತಾ?

ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿಗೆ ಹಣ ವಂಚಿಸಿದ ಪ್ರಕರಣದಲ್ಲಿ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ದೋಷಿ ಎಂದು ಸಾಬೀತಾಗಿದ್ದು, ಅಲ್ಲಿನ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Mahatma Gandhi
ಮಹಾತ್ಮ ಗಾಂಧಿ

By

Published : Jun 8, 2021, 7:16 AM IST

Updated : Jun 8, 2021, 11:17 AM IST

ಜೋಹಾನ್ಸ್‌ಬರ್ಗ್:ಹಣ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ಆಶಿಶ್ ಲತಾ ರಾಮ್‌ಗೋಬಿನ್ (56)ಗೆ ದಕ್ಷಿಣ ಆಫ್ರಿಕಾದ ಡರ್ಬನ್ ನ್ಯಾಯಾಲಯವು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಆಶಿಶ್ ಲತಾ ರಾಮ್‌ಗೋಬಿನ್ ಅವರು ನಕಲು ದಾಖಲೆಗಳನ್ನು ಒದಗಿಸಿ ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿ ಮಹಾರಾಜ್ ಅವರಿಗೆ 6.2 ಮಿಲಿಯನ್​ ರ‍್ಯಾಂಡ್​ ಅಂದರೆ 3,33,59,586 ರೂ. ಹಣವನ್ನು ವಂಚಿಸಿರುವ ಆರೋಪ ಹೊತ್ತಿದ್ದು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ರಾಮ್‌ಗೋಬಿನ್​ರನ್ನು 'ದೋಷಿ' ಎಂದು ಡರ್ಬನ್ ವಿಶೇಷ ವಾಣಿಜ್ಯ ಅಪರಾಧ ನ್ಯಾಯಾಲಯ ಪರಿಗಣಿಸಿ ತೀರ್ಪು ನೀಡಿದೆ.

ಲತಾ ರಾಮ್‌ಗೋಬಿನ್ ಅವರು ಎನ್‌ಜಿಒ ಒಂದು ನಡೆಸುತ್ತಿರುವ ಅಂತಾರಾಷ್ಟ್ರೀಯ ಅಹಿಂಸಾ ಕೇಂದ್ರದ ಪಾರ್ಟಿಸಿಪೇಟಿವ್​ ಡೆವಲಪ್​ಮೆಂಟ್​ ಇನಿಶಿಯೇಟಿವ್​​ ಸ್ಥಾಪಕಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ಇಲ್ಲಿ ಇವರು ಪರಿಸರ, ಸಾಮಾಜಿಕ ಮತ್ತು ರಾಜಕೀಯ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುವ ಹೋರಾಟಗಾರ್ತಿ ಎಂದು ತಮ್ಮನ್ನು ಬಿಂಬಿಸಿಕೊಂಡಿದ್ದರು.

ಪ್ರಕರಣ ಹಿನ್ನೆಲೆ

2015 ರಲ್ಲಿ ನ್ಯೂ ಆಫ್ರಿಕಾ ಅಲೈಯನ್ಸ್ ಫೂಟ್​ವೇರ್​ ಡಿಸ್ಟ್ರಿಬ್ಯುಟರ್ಸ್​ ಎಂಬ ಕಂಪನಿಯ ನಿರ್ದೇಶಕ ಮಹಾರಾಜ್​​ ಅವರು ಆಶಿಶ್ ಲತಾ ರಾಮ್‌ಗೋಬಿನ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಈ ಕಂಪನಿಯು ಲಿನನ್ ಬಟ್ಟೆ (ಫ್ಯಾಬ್ರಿಕ್) ಹಾಗೂ ಪಾದರಕ್ಷೆಗಳನ್ನು ಇತರ ದೇಶಗಳಿಂದ ಆಮದು ಮಾಡಿಕೊಂಡು ಮಾರಾಟ ಮಾಡುತ್ತದೆ. ಲತಾ ರಾಮ್‌ಗೋಬಿನ್ ಅವರು ಲಿನನ್ ಬಟ್ಟೆಯಿರುವ ಮೂರು ಕಂಟೇನರ್‌ಗಳನ್ನು ಹಡಗಿನ ಮೂಲಕ ಭಾರತದಿಂದ ತರಿಸಿಕೊಡುವುದಾಗಿ ಮಹಾರಾಜ್​ಗೆ ಭರವಸೆ ನೀಡಿ, ಇದಕ್ಕಾಗಿ ಅವರ ಬಳಿ 3,33,59,586 ರೂ. ಹಣವನ್ನು ಪಡೆದಿದ್ದರು. ನೆಟ್​ ಕೇರ್ ​ಬ್ಯಾಂಕ್​ ಖಾತೆ ಮೂಲಕ ಈ ಹಣವನ್ನು ಪಾವತಿ ಮಾಡಿರುವುದಾಗಿ ನಕಲಿ ಸಹಿಯುಳ್ಳ ದಾಖಲೆಗಳನ್ನು ತೋರಿಸಿದ್ದರು. ಇದು ನಕಲಿ ದಾಖಲೆಗಳೆಂದು ತಿಳಿದ ಬಳಿಕ ಮಹಾರಾಜ್ ಪ್ರಕರಣ ದಾಖಲಿಸಿದ್ದು, ಲತಾ ರಾಮ್‌ಗೋಬಿನ್ ಅವರನ್ನು ಬಂಧಿಸಲಾಗಿತ್ತು. ಮೊದಲು ಜಾಮೀನಿನ ಮೇಲೆ ಹೊರಬಂದಿದ್ದ ಲತಾ ಇದೀಗ ಜೈಲುಪಾಲಾಗಿದ್ದಾರೆ.

ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಇಡೀ ವಿಶ್ವವೇ ಕೊಂಡಾಡುತ್ತದೆ. ಗಾಂಧೀಜಿಯ ಹಲವಾರು ವಂಶಸ್ಥರು ಇಂದಿಗೂ ಸಮಾಜಸ ಒಳಿತಿಗಿಗಾಗಿ ಹೋರಾಡುವ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಲತಾ ರಾಮ್‌ಗೋಬಿನ್ ಅವರ ತಾಯಿ ಎಲಾ ಗಾಂಧಿ ಅವರು ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿದ್ದು. ಭಾರತ ಮತ್ತು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಗೌರವಗಳನ್ನು ಸ್ವೀಕರಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರಾಮ್‌ಗೋಬಿನ್ ಸೋದರ ಸಂಬಂಧಿಗಳಾದ ಕೀರ್ತಿ ಮೆನನ್, ಉಮಾ ಧುಪೆಲಿಯಾ-ಮೆಸ್ತ್ರಿ ಹಾಗೂ ದಿವಂಗತ ಸತೀಶ್ ಧುಪೆಲಿಯಾ ಕೂಡ ಮಾನವ ಹಕ್ಕುಗಳ ಹೋರಾಟಗಾರರಾಗಿದ್ದಾರೆ. ಆದರೆ ಲತಾ ರಾಮ್‌ಗೋಬಿನ್​ ಮಾತ್ರ ಅಪರಾಧಿಯಾಗಿ ತಮ್ಮ ಕುಟುಂಬದ ಗೌರವಕ್ಕೆ ಮಸಿ ಬಳಿದಿದ್ದಾರೆ.

Last Updated : Jun 8, 2021, 11:17 AM IST

ABOUT THE AUTHOR

...view details