ವಿಶಾಖಪಟ್ಟಣ: ಯುವತಿಯೊಬ್ಬರು ಲೋನ್ ಆ್ಯಪ್ ಸಹವಾಸಕ್ಕೆ ಹೋಗದಿದ್ದರೂ ಸಂಕಷ್ಟ ಸಿಲುಕಿರುವ ಪ್ರಕರಣವೊಂದು ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಸಾಲ ಮರು ಪಾವತಿಸದಿದ್ದರೆ ವೇಶ್ಯೆಯ ರೀತಿಯಲ್ಲಿ ಜಾಹೀರಾತು ನೀಡಲಾಗುವುದು ಎಂದು ಬೆದರಿಕೆ ಹಾಕಿದ್ದ ಕೆಲವರನ್ನು ವಿಶಾಖಪಟ್ಟಣದ ಸೈಬರ್ ಕ್ರೈಮ್ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.
ಪ್ರಕರಣದ ವಿವರ: ಪೊಲೀಸರು ನೀಡಿದ ಮಾಹಿತಿಯ ಪ್ರಕಾರ- ಲೋನ್ ಆ್ಯಪ್ ಕಂಪನಿಯೊಂದು ವ್ಯಕ್ತಿಯೊಬ್ಬನಿಗೆ 4 ಸಾವಿರ, 2500 ಹಾಗೂ 2500 ರೂಪಾಯಿಗಳಂತೆ ಮೂರು ಬಾರಿ ಲೋನ್ ನೀಡಿತ್ತು. ಆತ ಆ ಸಾಲವನ್ನು ಸರಿಯಾಗಿ ಮರುಪಾವತಿ ಕೂಡ ಮಾಡಿದ್ದರು. ಆದ್ರೆ ಮತ್ತೆ ಲೋನ್ ಬೇಕೆಂದು ಕೇಳದಿದ್ದರೂ ಅವರ ಖಾತೆಗೆ 4 ಸಾವಿರ ರೂಪಾಯಿ ಜಮೆಯಾಯಿತು. ಆದರೆ ಈ ಬಾರಿ ಆ ವ್ಯಕ್ತಿ ಮರುಪಾವತಿ ಮಾಡಲಿಲ್ಲ.
ಆದರೆ ವಿಚಿತ್ರ ಏನೆಂದರೆ ಖಾತೆಯಲ್ಲಿ 4 ಸಾವಿರ ರೂಪಾಯಿ ಜಮೆಯಾದ ವ್ಯಕ್ತಿಯ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಹೆಸರಿದೆ ಎನ್ನುವ ಒಂದೇ ಕಾರಣಕ್ಕೆ ಈ ಪ್ರಕರಣಕ್ಕೆ ಯಾವ ಕಡೆಯಿಂದಲೂ ಸಂಬಂಧವಿಲ್ಲದ ಯುವತಿಯೊಬ್ಬರಿಗೆ ಲೋನ್ ಆ್ಯಪ್ ಕಡೆಯಿಂದ ಮೆಸೇಜ್ ಬರಲಾರಂಭಿಸಿದವು. ಆ ವ್ಯಕ್ತಿ ಪಡೆದ ಸಾಲವನ್ನು ಯುವತಿ ಪೂರ್ಣವಾಗಿ ಪಾವತಿಸದಿದ್ದರೆ, ಆಕೆಯನ್ನು ವೇಶ್ಯೆ ಎಂದು ಬಿಂಬಿಸಿ ಆ ಫೋಟೊವನ್ನು ಆಕೆಗೆ ಗೊತ್ತಿರುವವರಿಗೆಲ್ಲ ವೈರಲ್ ಮಾಡಲಾಗುವುದು ಎಂದು ಬೆದರಿಸಲಾಯಿತು.