ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಗುಂಪಿಗೆ ಸೇರಿದ ಭಯೋತ್ಪಾದಕನನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಭಯೋತ್ಪಾದಕನನ್ನು ಮೊಹಮ್ಮದ್ ಇಕ್ಬಾಲ್ ಭಟ್ ಎಂದು ಗುರುತಿಸಲಾಗಿದೆ. ತಿಲ್ಗಾಮ್ ಪಯೀನ್ ಪ್ರದೇಶದ ನಿವಾಸಿಯಾದ ಈತನನ್ನು ಭದ್ರತಾ ಪಡೆಗಳ ಜಂಟಿ ತಂಡವು ಬಾರಾಮುಲ್ಲಾದ ಕ್ರೀರಿ ಪ್ರದೇಶದ ಚೆಕ್‌ಪಾಯಿಂಟ್‌ನಲ್ಲಿ ಬಂಧಿಸಿದೆ ಎಂದು ತಿಳಿದುಬಂದಿದೆ.
"ಬಂಧಿತ ಭಯೋತ್ಪಾದಕ ವಿಧ್ವಂಸಕ ಚಟುವಟಿಕೆಗಳನ್ನು ಎಸಗುವ ಸಲುವಾಗಿ ಅಗತ್ಯವಾದ ಸರಕು ಸಾಗಾಣಿಕೆಯ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪಾಕಿಸ್ತಾನಿ ಭಯೋತ್ಪಾದಕರಾದ ಸೈಫುಲ್ಲಾ ಮತ್ತು ಅಬು ಜರಾರ್ ಜೊತೆ ಸಂಪರ್ಕದಲ್ಲಿದ್ದನು" ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಬಂಧಿತ ಭಯೋತ್ಪಾದಕ ಈಗಾಗಲೇ ನಡೆದ ಹಲವಾರು ಉಗ್ರಗಾಮಿ ಕೃತ್ಯಗಳಿಗೆ ಸಹಾಯ ಮಾಡಿದ್ದ ಎಂದು ತಿಳಿದು ಬಂದಿದೆ. ಈತನ ಬಂಧನದಿಂದ ಭವಿಷ್ಯದಲ್ಲಿ ನಡೆಯಬಹುದಾಗಿದ್ದ ದೊಡ್ಡ ಪ್ರಮಾಣದ ಉಗ್ರಗಾಮಿ ದಾಳಿಗಳನ್ನು ತಡೆಗಟ್ಟಿದಂತಾಗಿದೆ. ನರ್ಬಾಲ್ ಮತ್ತು ರೆಂಜಿ ಪ್ರದೇಶಗಳ ಮಧ್ಯೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸುಧಾರಿತ ಸ್ಫೋಟಕಗಳನ್ನು ಬಳಸಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ರೂಪಿಸಲಾದ ಸಂಚಿಗೆ ಈತ ಬೆಂಬಲ ನೀಡುತ್ತಿದ್ದ ಎಂದು ಹೇಳಲಾಗ್ತಿದೆ.