ಲುಧಿಯಾನ: ಪ್ರಿಯಕರನನ್ನು ಮದುವೆಯಾಗಲು ಮನೆ ಬಿಟ್ಟು ಹೊರಹೋದ 24 ವರ್ಷದ ಯುವತಿಯೊಬ್ಬಳು 12 ದಿನಗಳ ನಂತರ ಸಮಾಧಿಯಾಗಿ ಪತ್ತೆಯಾದ ಘಟನೆ ಪಂಜಾಬಿನ ಜಗರಾಂವ್ನಲ್ಲಿ ಘಟಿಸಿದೆ. ಯುವತಿಯನ್ನು ಕೊಲೆಗೈದು ಶವವನ್ನು ಕುದುರೆ ಫಾರ್ಮ್ನಲ್ಲಿ ಹೂತ ಆರೋಪದ ಮೇಲೆ ಯುವತಿಯ ಲವರ್ ಮತ್ತು ಆತನ ಮೂವರು ಸಹಚರರನ್ನು ಲುಧಿಯಾನ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳು ಮೊದಲು ಮೃತ ದೇಹವನ್ನು ಸುಧಾರ್ ಕಾಲುವೆಯಲ್ಲಿ ಎಸೆದಿದ್ದಾರೆ. ಆದರೆ ನೀರಿನ ಹರಿವು ಕಡಿಮೆಯಾದ ಕಾರಣ ಅವರು ಮರುದಿನ ದೇಹವನ್ನು ಅಲ್ಲಿಂದ ಎತ್ತಿ ನಂತರ ಅದನ್ನು ಸುಡಲು ಪ್ರಯತ್ನಿಸಿದ್ದಾರೆ. ಆದರೆ ಅದೂ ವಿಫಲವಾದಾಗ ಅರೆಬರೆ ಸುಟ್ಟ ಶವವನ್ನು ಪ್ರಮುಖ ಆರೋಪಿಯ ಒಡೆತನದ ಕುದುರೆ ಫಾರಂನಲ್ಲಿ (ಸ್ಟಡ್ ಫಾರಂನಲ್ಲಿ) ಹೂತು ಹಾಕಿದ್ದಾರೆ.
ಮೃತ ಯುವತಿಯನ್ನು ಲುಧಿಯಾನದ ಹಾತೂರ್ ಪ್ರದೇಶದ 24 ವರ್ಷದ ಜಸ್ಪಿಂದರ್ ಕೌರ್ ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ಪರಮಪ್ರೀತ್ ಸಿಂಗ್ (21), ಆತನ ಸಹೋದರ ಭಾವಪ್ರೀತ್ ಸಿಂಗ್, ಆತನ ಸ್ನೇಹಿತ ಏಕಮ್ಜೋತ್ ಮತ್ತು ಇನ್ನೊಬ್ಬ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಜಮೀನಿನಲ್ಲಿದ್ದ ಶವವನ್ನೂ ಹೊರತೆಗೆದಿದ್ದಾರೆ.
ನವೆಂಬರ್ 24 ರಂದು ಯುವತಿ ಸ್ವಲ್ಪ ನಗದು ಮತ್ತು ಚಿನ್ನಾಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿದ್ದಳು. ಮಗಳು ಕಾಣೆಯಾಗಿರುವ ಬಗ್ಗೆ ಹಾತೂರು ಪೊಲೀಸರನ್ನು ಸಂಪರ್ಕಿಸಿದರೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ.