ತಿರುವನಂತಪುರಂ: ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ತನ್ನ ಕಾರಿಗೆ ಮಗು ಒರಗಿ ನಿಂತಿದೆ ಎಂಬ ಒಂದೇ ಕಾರಣಕ್ಕೆ ಆರು ವರ್ಷದ ಮಗುವನ್ನು ಒದ್ದ 20 ವರ್ಷದ ಕೇರಳ ಯುವಕನೋರ್ವನನ್ನು ಕೇರಳದ ಕಣ್ಣೂರು ಜಿಲ್ಲೆಯ ತಲಸ್ಸೆರಿಯಲ್ಲಿ ಬಂಧಿಸಲಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಯುವಕನನ್ನು ಮೊಹಮ್ಮದ್ ಶೆಹಜಾದ್ ಎಂದು ಗುರುತಿಸಲಾಗಿದ್ದು, ಕಣ್ಣೂರು ಜಿಲ್ಲೆಯ ಶ್ರೀಮಂತ ಕುಟುಂಬದವನಾಗಿದ್ದಾನೆ. ದೇವಾಲಯದ ಜಾತ್ರೆಯ ಸೀಸನ್ನಲ್ಲಿ ಬಲೂನ್ ಮಾರಾಟ ಮಾಡಲು ಬಂದ ರಾಜಸ್ಥಾನಿ ದಂಪತಿಯ ಮಗು ಇದಾಗಿದೆ.
ಗುರುವಾರ ರಾತ್ರಿ ಸ್ಥಳೀಯ ಪೊಲೀಸ್ ಠಾಣೆಗೆ ಬಂದಿದ್ದ ಶೆಹಜಾದ್‌ನನ್ನು ಬಂಧಿಸದ ಪೊಲೀಸರ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಗುರುವಾರ ನಡೆದ ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದ ಯುವ ವಕೀಲರೊಬ್ಬರು ಮೊದಲಿಗೆ ಈ ಘಟನೆಯನ್ನು ಬೆಳಕಿಗೆ ತಂದಿದ್ದರು. ನಂತರ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರೂ, ಅಷ್ಟರೊಳಗೆ ಶೆಹಜಾದ್ ಅಲ್ಲಿಂದ ತರಳಿದ್ದ. ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.