ಇಡುಕ್ಕಿ(ಕೇರಳ): ಬೇರೆ ಯುವತಿ ಜೊತೆ ಮದುವೆಗೆ ಮುಂದಾಗಿದ್ದಾನೆ ಎಂದು ಯುವಕನ ಮುಖಕ್ಕೆ ಆ್ಯಸಿಡ್ ಎರಚಿದ್ದ (Adimali Acid Attack) ಇಬ್ಬರು ಮಕ್ಕಳ ತಾಯಿಯನ್ನು ಪೊಲೀಸರು ಬಂಧಿಸಿರುವ ಘಟನೆ ಇಡುಕ್ಕಿಯ ಆದಿಮಲಿ ಎಂಬಲ್ಲಿ ನಡೆದಿದೆ. ನವೆಂಬರ್ 16 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Acid Attack| ಯುವಕನ ಮುಖಕ್ಕೆ ಆ್ಯಸಿಡ್ ಎರಚಿದ ಮಹಿಳೆ; ಇದೇ ಕಾರಣ... ತಿರುವಂತಪುರಂನ ಅರುಣ್ ಕುಮಾರ್ (28) ಆ್ಯಸಿಡ್ ದಾಳಿಗೆ ಒಳಗಾಗಿದ್ದು, ನಗರದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಶೀಬಾ ಆ್ಯಸಿಡ್ ಎರಚಿದ ಪರಿಣಾಮ ಅರುಣ್ ದೃಷ್ಟಿ ಕಳೆದು ಕೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಫೇಸ್‌ಬುಕ್ ಗೆಳೆತನ ತಂದ ಸಂಕಷ್ಟ!
ತಿರುವನಂತಪುರಂನಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಶೀಬಾಗೆ ಫೇಸ್‌ಬುಕ್ ಮೂಲಕ ಅರುಣ್ನ ಪರಿಚಯವಾಗಿತ್ತು. ಮೂರು ವರ್ಷಗಳಿಂದ ಅವರು ಆತ್ಮೀಯರಾಗಿ ಮುಂದುವರೆದಿದ್ದರು. ಅರುಣ್ ಬೇರೊಂದು ಯುವತಿ ಜೊತೆ ಮದುವೆಯಾಗಲು ಮುಂದಾಗಿರುವ ವಿಚಾರ ತಿಳಿದ ಆಕೆ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಅರುಣ್ ಕುಮಾರ್ ತನ್ನ ಸೋದರ ಮಾವ ಮತ್ತು ಸ್ನೇಹಿತನೊಂದಿಗೆ ನವೆಂಬರ್ 16 ರಂದು ಆದಿಮಲಿ ಬಳಿಯ ಚರ್ಚ್‌ಗೆ ಹೋಗಿದ್ದರು. ಬೇಡಿಕೆ ಇಟ್ಟ ಹಣದ ವಿಚಾರವಾಗಿ ಮಾತನಾಡಲು ಬಂದಿದ್ದ ಆರೋಪಿ ಶೀಬಾ ಚರ್ಚ್‌ನಿಂದ ಹೊರ ಬಂದ ಅರುಣ್‌ರೊಂದಿಗೆ ಮೊದಲು ಮಾತುಕತೆ ನಡೆಸಿದ್ದಾರೆ. ನಂತರ ಆತ ಸ್ವಲ್ಪ ಮುಂದೆ ಹೋದಾಗ ಹಿಂದೆಯಿಂದ ಬಂದ ಆಕೆ ಅರುಣ್ ಮುಖಕ್ಕೆ ಆ್ಯಸಿಡ್ ಎರಚಿದ್ದಾಳೆ (Adimali Acid Attack). ಈ ವೇಳೆ ಆಕೆಯೂ ಗಾಯಗೊಂಡಿದ್ದಾಳೆ. ಘಟನೆ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ.
ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ನವೆಂಬರ್ 19 ರಂದು ಪ್ರಕರಣ ದಾಖಲಾಗಿದ್ದು, ಆರೋಪಿ ಶೀಬಾರನ್ನು ಬಂಧಿಸಲಾಗಿದೆ.