ಕೊಟ್ಟಾಯಂ :ಆಸ್ಪತ್ರೆಯಿಂದ ನವಜಾತ ಶಿಶು ಕಳ್ಳತನ ಪ್ರಕರಣವನ್ನು ಒಂದೇ ಗಂಟೆಯಲ್ಲಿ ಪೊಲೀಸರು ಬೇಧಿಸಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೊಟ್ಟಾಯಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ನರ್ಸ್ ಸೋಗಿನಲ್ಲಿ ಬಂದಿದ್ದ ಮಹಿಳೆಯೊಬ್ಬಳು ನವಜಾತ ಶಿಶುವನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದಳು.
ಕೂಡಲೇ ಆಸ್ಪತ್ರೆ ಸಿಬ್ಬಂದಿ ಹಾಗೂ ಮಗುವನ್ನು ಕಳೆದುಕೊಂಡಿದ್ದ ಪೋಷಕರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಒಂದೇ ಗಂಟೆಯಲ್ಲಿ ಶಿಶುವನ್ನು ಕದ್ದೊಯ್ದಿದ್ದ ಮಹಿಳೆಯನ್ನ ಬಂಧಿಸಿದ್ದಾರೆ.
ಮೂರು ದಿನಗಳ ಹಿಂದೆ ಮುಂಡಕಯಂ ಮೂಲದ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ನರ್ಸ್ ಸೋಗಿನಲ್ಲಿ ಅಲ್ಲಿಗೆ ಬಂದ ಮಹಿಳೆ ಮಗುವಿಗೆ ಕಾಮಾಲೆ ಇದೆ.
ಫೋಟೋಥೆರಪಿ ಚಿಕಿತ್ಸೆ ನೀಡಬೇಕೆಂದು ತಾಯಿಯಿಂದ ಮಗುವನ್ನು ತೆಗೆದುಕೊಂಡು ಹೋಗಿದ್ದಾಳೆ. ಅರ್ಧ ಗಂಟೆ ಕಳೆದರೂ ಮಗುವನ್ನು ವಾಪಸ್ ನೀಡದ ಕಾರಣ ಅನುಮಾನದ ಮೇರೆಗೆ ವಿಚಾರಿಸಿದಾಗ ಮಗು ಕಳುವಾಗಿರುವುದು ಬೆಳಕಿಗೆ ಬಂದಿತ್ತು.
ಆಸ್ಪತ್ರೆ ಸಮೀಪದ ಹೋಟೆಲ್‌ನಲ್ಲಿ ಮಗು ಕದ್ದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ತಿರುವಲ್ಲಾ ಮೂಲದ ನೀತು ರಾಜ್ ಎಂಬಾಕೆ ಬಂಧಿತ ಆರೋಪಿಯಾಗಿದ್ದಾಳೆ. ಮಗುವನ್ನು ತೆಗೆದುಕೊಂಡ ಮಹಿಳೆ ಕಳೆದ ಬುಧವಾರ ಆಸ್ಪತ್ರೆಯ ಆವರಣದಲ್ಲಿ ಕಾಣಿಸಿದ್ದಳು ಎಂದು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಸಂಬಂಧಿಕರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ಜ್ಯೋತಿಷ್ಯ ಮಾತು ಕೇಳಿ ಮಗಳನ್ನು ಕೊಂದು ನೇಣಿಗೆ ಶರಣಾದ ತಾಯಿ!