ಬೆಂಗಳೂರು: ಬಸ್ ನಿಲ್ಲಿಸುವ ವಿಚಾರಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ವ್ಯಕ್ತಿಯನ್ನು ಕೊಲೆಗೈದು ಶವ ಮೋರಿಗೆಸೆದು ಪರಾರಿಯಾಗಿದ್ದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ವೆಂಕಟಸ್ವಾಮಿ (52) ಮೃತ ವ್ಯಕ್ತಿ. ವೆಂಕಟೇಶ್ (48) ಕೊಲೆ ಆರೋಪಿ.
ಜನವರಿ 13ರಂದು ಸುಂಕದಕಟ್ಟೆಯ ಸಾಗರ್ ಟಿಂಬರ್ ಪ್ಲೈವುಡ್ ಅಂಗಡಿ ಮುಂಭಾಗದ ಮೋರಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಮೃತನ ಎದೆಯ ಎಡ ಎಲುಬುಗಳು ಮುರಿದು ಆತ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದು ತಿಳಿದುಬಂದಿತ್ತು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾಗಡಿ ರಸ್ತೆಯ ಕೊಡಿಗೆಹಳ್ಳಿಯ ನಿವಾಸಿಯಾಗಿದ್ದ ಆರೋಪಿ ವೆಂಕಟೇಶ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹತ್ಯೆಯ ಕಾರಣ ಗೊತ್ತಾಗಿದೆ.
ಬಸ್ ನಿಲ್ಲಿಸುವ ವಿಚಾರಕ್ಕೆ ಕಿರಿಕ್:ವೆಂಕಟೇಶ್ ಜನವರಿ 12ರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಜಿ.ಟಿ.ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಸ್ ನಿಲ್ಲಿಸಿ ಮಲಗಿದ್ದಾಗ ಅಲ್ಲಿಗೆ ಬಂದಿದ್ದ ವೆಂಕಟಸ್ವಾಮಿ, 'ತಾನು ಬಸ್ ನಿಲ್ಲಿಸುವ ಜಾಗದಲ್ಲಿ ಬಸ್ ನಿಲ್ಲಿಸಿದ್ದೀಯಾ?' ಎಂದು ವೆಂಕಟೇಶನ ಬಸ್‌ಗೆ ಕಲ್ಲೆಸೆದಿದ್ದ. ಬಸ್ಸಿನೊಳಗೂ ಪ್ರವೇಶಿಸಿ ಗಲಾಟೆ ಆರಂಭಿಸಿದ್ದಾನೆ. ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದಾಗ ವೆಂಕಟಸ್ವಾಮಿಗೆ ಕಾಲಿನಿಂದ ಒದ್ದು ಬಸ್ಸಿನ ಮೆಟ್ಟಿಲುಗಳ ಮೇಲಿಂದ ವೆಂಕಟೇಶ್ ಬೀಳಿಸಿದ್ದ. ಬಲವಾಗಿ ಕಾಲಿನಿಂದ ತುಳಿದ ಪರಿಣಾಮ ದೇಹದೊಳಗೆ ಗಂಭೀರವಾಗಿ ಗಾಯಗಳಾಗಿದ್ದು ವೆಂಕಟಸ್ವಾಮಿ ಮೃತಪಟ್ಟಿದ್ದ. ಮೃತದೇಹವನ್ನು ಸುಂಕದಕಟ್ಟೆಯ ಸಾಗರ್ ಟಿಂಬರ್ ಪ್ಲೈವುಡ್ ಅಂಗಡಿ ಮುಂಭಾಗದ ಮೋರಿಯಲ್ಲಿ ಎಸೆದು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತವ್ಯಕ್ತಿಯ ಪೂರ್ವಾಪರ ಕಲೆಹಾಕಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಬ್ಯಾಟರಾಯನಪುರ ಕೊಲೆ ಆರೋಪಿ ವಶಕ್ಕೆ:ಜ.14ರಂದು ಮೈಸೂರು ರಸ್ತೆಯ ಕಸ್ತೂರ್ಬಾ ನಗರ ನಿವಾಸಿ ಪೇಂಟರ್ ಜಗದೀಶ್ ಹತ್ಯೆ ಪ್ರಕರಣದ ಆರೋಪಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೇಮಂತ್ ಬಂಧಿತ ಆರೋಪಿ. ಪಾನಮತ್ತನಾಗಿದ್ದ ಜಗದೀಶ್ ಟಿಂಬರ್ ಯಾರ್ಡ್ ಬಡಾವಣೆ ರಸ್ತೆಯಲ್ಲಿ ನಿಂತಿದ್ದ. ಈ ವೇಳೆ ಬೈಕ್ನಲ್ಲಿ ಬಂದಿದ್ದ ಆರೋಪಿ ಹೇಮಂತ್ರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದೇ ವಿಚಾರಕ್ಕೆ ಜಗದೀಶ್ ಮತ್ತು ಹೇಮಂತ್ ನಡುವೆ ಗಲಾಟೆ ಶುರುವಾಗಿದೆ. ಹೇಮಂತ್ ಜಗದೀಶ್ ಕಪಾಳಕ್ಕೆ ಹೊಡೆದಿದ್ದಾರೆ. ಇದರಿಂದ ಜಗದೀಶ್ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಸ್ಥಳೀಯರು ಜಗದೀಶ್ರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಜ. 16ರಂದು ಜಗದೀಶ್ ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ಜಗದೀಶ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಆಸ್ಪತ್ರೆಗೆ ಬಂದು ಚಿನ್ನಾಭರಣ ಕದ್ದಿದ್ದ ನರ್ಸ್ ಅರೆಸ್ಟ್: ವಿಚಾರಣೆ ವೇಳೆ ಬಯಲಾಯ್ತು ಮತ್ತೊಂದು ಬ್ಲ್ಯಾಕ್ ಮೇಲ್ ಕಥೆ