ಬೆಂಗಳೂರು :ಬೌನ್ಸ್ ಕಂಪನಿಯ ಬೈಕ್ಗಳ ಮುಖಾಂತರ ಗ್ರಾಹಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರು ಅಂತಾರಾಜ್ಯ ದಂಧೆಕೋರರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಣಿಪುರ ಮೂಲದ ಮೊಹಮ್ಮದ್ ಸಜೀದ್ ಖಾನ್, ಮೊಹಮ್ಮದ್ ಅಜಾದ್ ಹಾಗೂ ಸಪಮ್ ಸೀತಲ್ ಕುಮಾರ್ ಸಿಂಗ್ ಬಂಧಿತ ಆರೋಪಿಗಳು. ಬಂಧಿತರಿಂದ 60 ಲಕ್ಷ ರೂ. ಮೌಲ್ಯದ 130 ಗ್ರಾಂ ಹೆರಾಯಿನ್, 2480 ಎಕ್ಸೆಟೆನ್ಸಿ ಮಾತ್ರೆಗಳನ್ನ ವಶಪಡಿಸಿಕೊಳ್ಳಲಾಗಿದೆ.
ಅಂತಾರಾಜ್ಯ ದಂಧೆಕೋರರ ಬಂಧನ.. ಆರೋಪಿಗಳು ಕೆಲಸ ಅರಸಿ ಮೂರು ವರ್ಷಗಳ ಹಿಂದೆ ರಾಜಧಾನಿಗೆ ಬಂದಿದ್ದರು. ಮೊಹಮ್ಮದ್ ಸಜೀದ್ ಖಾನ್ ಹಾಗೂ ಮೊಹಮ್ಮದ್ ಅಜಾದ್ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ದು, ಚಿಕನ್ ಶಾಪ್ಗಳಲ್ಲಿ ಪ್ರತ್ಯೇಕ ಕೆಲಸ ಮಾಡುತ್ತಿದ್ದರು.
ಮೂರನೇ ಆರೋಪಿ ಸಪಮ್ ಸೀತಲ್ ಕುಮಾರ್ ಸಿಂಗ್ ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಬರುವ ಸಂಬಳ ತೃಪ್ತಿಗೊಳ್ಳದ ಆರೋಪಿಗಳು ಐಷಾರಾಮಿ ಜೀವನಕ್ಕಾಗಿ ಮಣಿಪುರದ ಡ್ರಗ್ಸ್ ಸಾಗಾಟ ಮಾಡುವ ದಂಧೆಕೋರರ ಪರಿಚಯವಾಗಿತ್ತು. ದಂಧೆಯಲ್ಲಿ ಭಾಗಿಯಾದರೆ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ಅರಿತು ಮಾದಕ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆ.
ಮಿಕ್ಸರ್ ಗ್ರೈಂಡರ್ ಬಾಕ್ಸ್ಗಳ ಮೂಲಕ ಡ್ರಗ್ಸ್ ಸಾಗಾಣಿಕೆ :ಮಯನ್ಮಾರ್ ದೇಶದಿಂದ ವಾಮಮಾರ್ಗ ಮೂಲಕ ಮಣಿಪುರಕ್ಕೆ ಡ್ರಗ್ಸ್ ಸರಬರಾಜು ಮಾಡಿಕೊಳ್ಳುತ್ತಿದ್ದ ಆರೋಪಿಗಳು ಅಸ್ಸೋಂ ರಾಜಧಾನಿ ಗುವಾಹಟಿ ಮೂಲಕ ಮಿಕ್ಸರ್ ಗ್ರೈಂಡರ್ ಬಾಕ್ಸ್‌ಗಳಲ್ಲಿ ಹೆರಾಯಿನ್ ಇಟ್ಟು ಯಾರಿಗೂ ಅನುಮಾನ ಬಾರದಂತೆ ರೈಲಿನಲ್ಲಿ ಬೆಂಗಳೂರಿಗೆ ಸರಬರಾಜು ಮಾಡುತ್ತಿದ್ದರು. ಬಳಿಕ ತಮ್ಮದೇ ಆದ ಜಾಲದಿಂದ ಗ್ರಾಹಕರನ್ನ ಸಂಪರ್ಕಿಸಿ ಅವರಿಗೆ ಸೋಪು ಬಾಕ್ಸ್‌ಗಳಲ್ಲಿ ಚಿಕ್ಕ-ಚಿಕ್ಕ ಪೊಟ್ಟಣಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು.
ಬೌನ್ಸ್ ಬೈಕ್ಗಳಲ್ಲಿ ಡ್ರಗ್ಸ್ ಸಪ್ಲೈ :ಆರೋಪಿಗಳು ಪೊಲೀಸರಿಗೆ ಅನುಮಾನ ಬಾರದಿರಲು ಸೋಪಿನ ಪ್ಯಾಕ್ನಲ್ಲಿ ಡ್ರಗ್ಸ್ ಇಟ್ಟು ಬೌನ್ಸ್ ಸೇರಿ ವಿವಿಧ ಕಂಪನಿಯ ಬೈಕ್ಗಳಲ್ಲಿ ಸಾಗಾಟ ಮಾಡುತ್ತಿದ್ದರು. ಪೆಡ್ಲರ್ಗಳ ಜೊತೆ ಡ್ರಗ್ಸ್ ಡೀಲ್ ಮಾಡಿ ಸರಬರಾಜು ಮಾಡುವ ವೇಳೆ ಮಣಿಪುರಿ ಭಾಷೆಯ ಪಾಸ್ವರ್ಡ್ಗಳನ್ನ ಬಳಸಿ ವ್ಯವಹಾರ ನಡೆಸುತ್ತಿದ್ದರು. ಹೆಚ್ಚಾಗಿ ಈಶಾನ್ಯ ಭಾರತೀಯ ಮೂಲದ ಕಾಲೇಜು ವಿದ್ಯಾರ್ಥಿಗಳನ್ನು ಆರೋಪಿಗಳು ಗುರಿಯಾಗಿಸಿಕೊಳ್ಳುತ್ತಿದ್ದರು ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.