ಹೈದರಾಬಾದ್ :ಪತ್ನಿ, ಪುತ್ರಿಗೆ ವಿಷ ಉಣಿಸಿ ಕೊಂದ ಬಳಿಕ ಟೆಕ್ಕಿಯೊರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆ ಅಮೀನ್ಪುರ್ ಪಟ್ಟಣದ ಬೀರಂಗೂಡ್ನಲ್ಲಿ ನಡೆದಿದೆ.
ಶ್ರೀಕಾಂತ್ ಗೌಡ (42), ಪತ್ನಿ ಅನಾಮಿಕ(40) ಹಾಗೂ ಪುತ್ರಿ ಶ್ರೀಸ್ನಿಗ್ಧ(7) ಮೃತ ದುರ್ದೈವಿಗಳು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ಶ್ರೀಕಾಂತ್ ಗೌಡ ಟಿಸಿಎಸ್ನ ಉದ್ಯೋಗಿದ್ದು, ಪತ್ನಿ ಕಾರ್ಪೊರೇಷನ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.
ಇಬ್ಬರು ಪ್ರೀತಿಸಿ ಹಿರಿಯರನ್ನು ಒಪ್ಪಿಸಿ ಮದುವೆಯಾಗಿದ್ದರು. ಸ್ವಂತ ಮನೆಯಲ್ಲಿ ಚೆನ್ನಾಗಿ ಜೀವನ ನಡೆಸುತ್ತಿದ್ದ ಇವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಏಳು ವರ್ಷದ ಮಗಳಿದ್ದಳು. ಆದರೆ, ಬರ ಸಿಡಿಲು ಎಂಬಂತೆ ಇದಕ್ಕಿದ್ದಂತೆ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ.
ಮನೆ ಕೆಲಸದಾಕೆಯನ್ನು ಎರಡು ದಿನಗಳ ಮೊದಲೇ ಕೆಲಸಕ್ಕೆ ಬರಬೇಡ ಎಂದು ಹೇಳಿದ್ದರಂತೆ. 7 ವರ್ಷಗಳ ಹಿಂದೆ ಬೀರಂಗೂಡ್ನ ವಂದನಪುರಿ ಕಾಲೋನಿಯಲ್ಲಿ ಮನೆ ಖರೀದಿಸಿ ಇಲ್ಲೇ ವಾಸವಾಗಿದ್ದರು. ಮನೆಯ ಒಂದು ಕೊಠಡಿಯಲ್ಲಿ ಶ್ರೀಕಾಂತ್ ಗೌಡ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಪತ್ನಿ ಹಾಗೂ ಪುತ್ರಿಯ ಮೃತದೇಹಗಳ ಬಾಯಿಯಲ್ಲಿ ನೊರೆ, ಮೂಗಿನಲ್ಲಿ ರಕ್ತ ಬಂದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.