ಇಸ್ಲಾಮಾಬಾದ್: ನೆರೆಯ ಶತ್ರು ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದ್ದು, ಅಪಹರಣ ಯತ್ನ ವಿಫಲವಾದ ಹಿನ್ನೆಲೆಯಲ್ಲಿ 18 ವರ್ಷದ ಹಿಂದೂ ಯುವತಿಯನ್ನು ಶೂಟ್ ಮಾಡಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಸುಕ್ಕೂರ್ ಎಂಬಲ್ಲಿ ನಡೆದಿದೆ.
ಪೂಜಾ ಓಡ್ ಮೃತ ದುರ್ದೈವಿ. ದಾಳಿಕೋರರು ಮೊದಲು ಅಪಹರಣ ಮಾಡಲು ಯತ್ನಿಸಿದ್ದಾಗ ಯುವತಿ ತೀವ್ರವಾಗಿ ಪ್ರತಿರೋಧಿಸಿದ್ದಾಳೆ. ಈ ವೇಳೆ ಕಿಡಿಗೇಡಿಗಳು ರಸ್ತೆಯ ಮಧ್ಯದಲ್ಲೇ ಆಕೆಗೆ ಗುಂಡಿಕ್ಕಿ ಕೊಂದಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಪ್ರತಿ ವರ್ಷ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಹಲವಾರು ಮಹಿಳೆಯರನ್ನು ವಿಶೇಷವಾಗಿ ಸಿಂಧ್ ಪಾಕಿಸ್ತಾನದ ಹಿಂದೂಗಳನ್ನು ಧಾರ್ಮಿಕ ಉಗ್ರರು ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸುತ್ತಾರೆ.
ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯಗಳು ಬಲವಂತದ ವಿವಾಹಗಳು ಮತ್ತು ಮತಾಂತರದ ಸಮಸ್ಯೆಯನ್ನು ಬಹಳ ಹಿಂದಿನಿಂದಲೂ ಎದುರಿಸುತ್ತಿವೆ. ಅಲ್ಪಸಂಖ್ಯಾತರ ಹಕ್ಕುಗಳ ಪೀಪಲ್ಸ್ ಕಮಿಷನ್ ಮತ್ತು ಸಾಮಾಜಿಕ ನ್ಯಾಯ ಕೇಂದ್ರದ ಪ್ರಕಾರ, 2013 ಮತ್ತು 2019ರ ನಡುವೆ 156 ಬಲವಂತದ ಮತಾಂತರದ ಘಟನೆಗಳು ನಡೆದಿವೆ.
2019ರಲ್ಲಿ ಸಿಂಧ್ ಸರ್ಕಾರವು ಎರಡನೇ ಬಾರಿಗೆ ಬಲವಂತದ ಮತಾಂತರ ಮತ್ತು ಮದುವೆಗಳನ್ನು ಕಾನೂನು ಬಾಹಿರಗೊಳಿಸಲು ಪ್ರಯತ್ನಿಸಿತ್ತು. ಆದರೆ, ಕೆಲವು ಧಾರ್ಮಿಕ ಪ್ರತಿಭಟನಾಕಾರರು ಮಸೂದೆ ವಿರೋಧಿಸಿದ್ದರು. ಯುವತಿಯರು ಬಲವಂತವಾಗಿ ಮತಾಂತರಗೊಳ್ಳುವುದಿಲ್ಲ. ಆದರೆ, ಮುಸ್ಲಿಂ ಪುರುಷರನ್ನು ಪ್ರೀತಿಸಿದ ನಂತರ ಹಾಗೆ ಮಾಡುತ್ತಾರೆ ಎಂದು ವಾದಿಸಿದ್ದರು ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ:ಭಾರತದ ವಿದೇಶಾಂಗ ನೀತಿಯನ್ನು ಹಾಡಿ ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್!