ಗಾಂಧಿನಗರ(ಗುಜರಾತ್):ಹತ್ತೇ ದಿನದಲ್ಲಿ 3 ರಿಂದ 7 ವರ್ಷದೊಳಗಿನ ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಪ್ರಕರಣದಡಿ 26 ವರ್ಷದ ಕಾರ್ಮಿಕನನ್ನು ಗಾಂಧಿನಗರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿಜಯ್ ಠಾಕೋರ್ ಎಂದು ಗುರುತಿಸಲಾಗಿದೆ. ಓರ್ವ ಬಾಲಕಿಯನ್ನು ಆರೋಪಿ ಹತ್ಯೆ ಮಾಡಿದ್ದಾನೆ. ಆರೋಪಿ ಮೂರು ವರ್ಷದ ಬಾಲಕಿಯನ್ನು ಕೊಂದ ನಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಆಕೆಯ ಶವವನ್ನು ಮೋರಿಗೆ ಎಸೆದಿದ್ದಾನೆ ಎಂದು ಗಾಂಧಿನರದ ಪೊಲೀಸ್ ಮಹಾನಿರೀಕ್ಷಕ ಅಭಯ್ ಚುಡಾಸಮಾ ತಿಳಿಸಿದರು.
ಆರೋಪಿ ವಿವಾಹಿತನಾಗಿದ್ದು, ಆತನಿಗೆ ಓರ್ವ ಪುತ್ರಿ ಇದ್ದಾಳೆ. ಈತನಿಗೆ ಅಶ್ಲೀಲ ಚಿತ್ರಗಳನ್ನು ನೋಡುವ ಚಟವಿದ್ದು, ವಿಕೃತ ಮನಸ್ಥಿತಿ ಹೊಂದಿದ್ದಾನೆ. ಇದುವರೆಗೆ 3, 5 ಮತ್ತು 7 ವರ್ಷದ ಮೂವರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಒಬ್ಬಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ನವೆಂಬರ್ 11 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಐಜಿಪಿ ಹೇಳಿದ್ದಾರೆ.
ಪ್ರಕರಣ- 1
ನವೆಂಬರ್ 4 ರಂದು ಅಪರಿಚಿತ ವ್ಯಕ್ತಿಯೊಬ್ಬ ತನ್ನ ಐದು ವರ್ಷದ ಮಗಳನ್ನು ಅಪಹರಿಸಿ ಅದೇ ದಿನ ಏಕಾಂತ ಸ್ಥಳದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ರಾಂಚರ್ಡಾ ಗ್ರಾಮದ ಬಳಿ ವಾಸಿಸುವ ಕಾರ್ಮಿಕ ಮಹಿಳೆ ಗಾಂಧಿನಗರ ಜಿಲ್ಲೆಯ ಸಂತೇಜ್ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಬಾಲಕಿಯ ವೈದ್ಯಕೀಯ ತಪಾಸಣೆ ಮಾಡಿಸಿದಾಗ ಆಕೆಯ ಮೇಲೆ ಅತ್ಯಾಚಾರವೆಸಗಿರುವುದು ದೃಢಪಟ್ಟಿದೆ. ಸಂತೇಜ್ ಕೈಗಾರಿಕಾ ಪ್ರದೇಶದಲ್ಲಿ ಹಲವಾರು ವಲಸೆ ಕಾರ್ಮಿಕರು ಇದ್ದಾರೆ ಎಂದು ಚುಡಾಸಮಾ ಹೇಳಿದ್ದಾರೆ.