ನವದೆಹಲಿ:46 ನಕಲಿ ಕಂಪನಿಗಳನ್ನು ನಡೆಸುತ್ತಿದ್ದ ಮತ್ತು ಸುಮಾರು 82.23 ಕೋಟಿ ರೂಪಾಯಿಯ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸೃಷ್ಟಿಸಿದ್ದ ಆರೋಪದಲ್ಲಿ ಓರ್ವನನ್ನು ಜಿಎಸ್ಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹಣಕಾಸು ಇಲಾಖೆ ಸೋಮವಾರ ಮಾಹಿತಿ ನೀಡಿದೆ.
ದೆಹಲಿ ಪೂರ್ವ ವಲಯದ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಆರೋಪಿಯಾದ ಅರವಿಂದ್ ಕುಮಾರ್ನನ್ನು ಬಂಧಿಸಿದ್ದಾರೆ. ತನಿಖೆಯ ನಂತರ ಆತನ 46 ನಕಲಿ ಕಂಪನಿಗಳ ಬಗ್ಗೆ ಮಾಹಿತಿ ಹೊರಬಂದಿದೆ. ಇವುಗಳನ್ನು ಅರವಿಂದ್ ಕುಮಾರ್ ಹಾಗೂ ಅವರ ಸಹಚರರು ನಿರ್ವಹಿಸುತ್ತಿದ್ದರೆಂದು ತಿಳಿದುಬಂದಿದೆ.
ಅರವಿಂದ್ ಹಾಗೂ ಅವರ ಸಹಚರರು ಹೊಂದಿದ ಕಂಪನಿಗಳಲ್ಲಿ ಯಾವುದೇ ವ್ಯವಹಾರ ನಡೆಯುತ್ತಿರಲಿಲ್ಲ. ನಕಲಿ ಐಟಿಸಿಗಳನ್ನು ರಚಿಸುವ ಸಲುವಾಗಿ ಕಂಪನಿಗಳನ್ನು ಸೃಷ್ಟಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.