ಪಾಟ್ನಾ (ಬಿಹಾರ): ಮಧ್ಯವಯಸ್ಕ ಮಹಿಳೆಯೊಬ್ಬಳಿಗೆ ಅಂಡರ್ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ ಹಾಕಿ 20 ರಿಂದ 25 ಲಕ್ಷ ರೂಪಾಯಿ ಲಪಟಾಯಿಸಿದ ಘಟನೆ ರಾಜಧಾನಿ ಪಾಟ್ನಾದ ಕಂಕಡಬಾಗ್ ಪ್ರದೇಶದ ನ್ಯೂ ಚಿತ್ರಗುಪ್ತ ನಗರದಲ್ಲಿ ನಡೆದಿದೆ. ಅಷ್ಟೇ ಅಲ್ಲ, ಮಹಿಳೆಯ ಖಾತೆಯಿಂದ ಕ್ರಿಮಿನಲ್‌ಗಳು ಮೂರು ಕೋಟಿ ವಹಿವಾಟು ನಡೆಸಿದ್ದು, ಆರ್‌ಟಿಜಿಎಸ್ ಮತ್ತು ಎನ್‌ಇಎಫ್‌ಟಿ ಮೂಲಕ ವಹಿವಾಟು ನಡೆಸಲಾಗಿದೆ.
ಮಹಿಳೆಯ ಹೇಳಿಕೆಯ ಮೇರೆಗೆ ಪಾಟ್ನಾದ ಪತ್ರಕಾರ್ ನಗರ ಪೊಲೀಸ್ ಠಾಣೆಯಲ್ಲಿ ಫೋರ್ಜರಿ ಸೇರಿದಂತೆ ಇತರ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪತ್ರಕಾರ್ ನಗರ ಪೊಲೀಸರ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಎಫ್‌ಐಆರ್ ನಂತರ ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ಅಷ್ಟಕ್ಕೂ ಆರೋಪಿ ಮಹಿಳೆಯನ್ನು ಟ್ರ್ಯಾಕ್ ಮಾಡಿದ್ದು ಹೇಗೆ? ಆರೋಪಿಯು ಆಕೆಗೆ ಹೇಗೆ ಪರಿಚಯ? ಇದು ವಂಚನೆ ಪ್ರಕರಣವಾ? ಮಹಿಳೆ ಬೇರೆ ಗ್ಯಾಂಗ್‌ಗೆ ಸೇರಿದವಳಾ ಹೇಗೆ ಎಂಬೆಲ್ಲ ವಿಷಯಗಳ ಬಗ್ಗೆ ಈಗ ತನಿಖೆ ನಡೆಯುತ್ತಿದೆ.
7-8 ವರ್ಷಗಳಿಂದ ಮಹಿಳೆಗೆ ವಂಚನೆ:ಪತ್ರಕಾರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಹಣ ಲಪಟಾಯಿಸಿದ ಆರೋಪಿಗಳು ಕಳೆದ 5 ರಿಂದ 7 ವರ್ಷಗಳಿಂದ ಮಹಿಳೆಗೆ ವಂಚಿಸುತ್ತಿದ್ದರು. ಪ್ರತಿ ಬಾರಿಯೂ ಆಕೆಯ ಮಕ್ಕಳು ಮತ್ತು ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು. ತನ್ನ ಮಕ್ಕಳು ಮುಂಬೈ ಮತ್ತು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಆಕೆಯ ಬ್ಯಾಂಕ್ ಖಾತೆಯನ್ನು ಬಳಸುತ್ತಿದ್ದ ಖದೀಮರು, ಮಹಿಳೆಗೆ ಆಕೆಯ ಮಕ್ಕಳು ಈಗ ಯಾವ ಬಟ್ಟೆ ಧರಿಸಿದ್ದಾರೆ ಮತ್ತು ಅವರು ಯಾವ ಸಮಯದಲ್ಲಿ ಎಲ್ಲಿದ್ದಾರೆ ಎಂದು ಹೇಳುತ್ತಿದ್ದರು. ಇದಾದ ನಂತರ ಆಕೆ ಮಕ್ಕಳನ್ನು ವಿಚಾರಿಸಿದಾಗ ಖದೀಮರು ಹೇಳಿದ್ದು ಸತ್ಯ ಎಂದು ಗೊತ್ತಾಗುತ್ತಿತ್ತು. ಇದರಿಂದ ಮಹಿಳೆಯಲ್ಲಿ ಭಯ ಹುಟ್ಟಿಕೊಂಡಿತ್ತು. ಆದರೆ, ಮಕ್ಕಳು ಮತ್ತು ಕುಟುಂಬದ ಸುರಕ್ಷತೆಯ ಕಾರಣ ಆಕೆ ಕುಟುಂಬ ಸದಸ್ಯರೊಂದಿಗೆ ಮಾಹಿತಿ ಹಂಚಿಕೊಂಡಿಲ್ಲ ಎನ್ನಲಾಗಿದೆ.