ಚಿಕ್ಕಮಗಳೂರು: 'ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ..' ಎಂದು ಕುಟುಂಬಸ್ಥರಿಗೆ ವಾಯ್ಸ್ ಮೆಸೇಜ್ ಮಾಡಿ ಕಾರುಸಮೇತ ಭದ್ರಾ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಮಂಜುನಾಥ್ ಹಾಗೂ ಅವರ ಅತ್ತೆ ಸುನಂದಮ್ಮ ಮೃತ ದುರ್ದೈವಿಗಳು. ಮಂಜುನಾಥ್ ಪತ್ನಿ ನೀತು (35) ಹಾಗೂ ಪುತ್ರ ಧ್ಯಾನ್ (13) ಇಬ್ಬರು ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ.
ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆ ಯತ್ನ: ಇಬ್ಬರು ಸಾವು, ಮತ್ತಿಬ್ಬರು ಸೇಫ್ ಮೃತರ ಕುಟುಂಬ ಮೊನ್ನೆಯಷ್ಟೇ ಬೆಂಗಳೂರಿನಿಂದ ತಮ್ಮೂರಿನತ್ತ ಪಯಣ ಬೆಳೆಸಿದ್ದರು. ಬೆಂಗಳೂರಿನಿಂದ ಬಂದವರು ನಿನ್ನೆ ಕೆಲವು ಸಂಬಂಧಿಕರ ಮನೆಗೆ ತೆರಳಿ ಮಾತನಾಡಿದ್ದಾರೆ. ಆದ್ರೆ, ಅದ್ಯಾಕೋ ಏನೋ ಮಧ್ಯರಾತ್ರಿ ಎಂ.ಸಿ ಹಳ್ಳಿಯ ಭದ್ರಾ ಜಲಾಶಯದ ನಾಲೆ ಬಳಿ ಬಂದು ಸಂಬಂಧಿಕರಿಗೆ ಫೋನ್ ಕರೆ ಮಾಡಿ ಜೊತೆಯಲ್ಲಿದ್ದವರಿಂದಲೇ ನನಗೆ ಮೋಸ ಆಗಿದೆ. ನಾವು ಆತ್ಮಹತ್ಯೆ ಮಾಡಿಕೊಳ್ತೀವಿ ಎಂದು ಹೇಳಿ ಕಾರಿನಲ್ಲಿ ನಿದ್ರೆ ಮಾಡುತ್ತಿದ್ದ ಪತ್ನಿ, ಪುತ್ರ ಹಾಗೂ ಅತ್ತೆಗೆ ಗೊತ್ತಾಗದಂತೆ ಕಾರನ್ನು ನಾಲೆಗೆ ಹಾರಿಸಿದ್ದ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ್ದರು.
ಇದನ್ನೂ ಓದಿ: ವಾಯ್ಸ್ ಮೆಸೇಜ್ ಮಾಡಿ ಭದ್ರಾ ನಾಲೆಗೆ ಹಾರಿ ಇಡೀ ಕುಟುಂಬ ಆತ್ಯಹತ್ಯೆಗೆ ಯತ್ನ; ಇಬ್ಬರು ಕಣ್ಮರೆ
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ನಾಪತ್ತೆಯಾಗಿದ್ದ ಮಂಜುನಾಥ್ ಹಾಗೂ ಅವರ ಅತ್ತೆ ಸುನಂದಮ್ಮಗೆ ನಿನ್ನೆ ಹುಡುಕಾಟ ನಡೆಸಿದ್ದರು. ಮಧ್ಯರಾತ್ರಿಯಿಂದ ಕಾರ್ಯಾಚರಣೆ ಬಳಿಕ ಮಂಜುನಾಥ್ ಮೃತದೇಹ ಎಂ.ಸಿಹಳ್ಳಿಯಿಂದ 42 ಕಿ.ಮೀ. ದೂರದ ಅಂಚೆ ಸಿದ್ದರಹಳ್ಳಿಯಲ್ಲಿ ಪತ್ತೆಯಾದ್ರೆ, ಸುನಂದಮ್ಮ ಮೃತದೇಹ ಕಾರಿನಲ್ಲೇ ಇತ್ತು. ನೀರಿಗೆ ಬಿದ್ದಿದ್ದ ತಾಯಿ-ಮಗ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.