ಹಥ್ರಾಸ್ (ಉತ್ತರ ಪ್ರದೇಶ): ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಪ್ರಕರಣ ದಾಖಲಿಸಿದ್ದ ರೈತನನ್ನು ಆರೋಪಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದಿದೆ.
ಅವನೀಶ್ ಶರ್ಮಾ (48) ಮೃತ ವ್ಯಕ್ತಿ. 2018ರಲ್ಲಿ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಅದೇ ಗ್ರಾಮದ ಗೌರವ್ ಶರ್ಮಾ ಎಂಬ ವ್ಯಕ್ತಿ ವಿರುದ್ಧ ಅವನೀಶ್ ಶರ್ಮಾ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಜೈಲು ಸೇರಿದ್ದ ಗೌರವ್ ಶರ್ಮಾ ಜಾಮೀನು ಮೇಲೆ ಬಿಡುಗಡೆಯಾಗಿ ಹೊರಬಂದಿದ್ದನು.
ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಿಂದ ರೈತನ ಗುಂಡಿಕ್ಕಿ ಹತ್ಯೆ ಇದನ್ನೂ ಓದಿ: ಕಾನ್ಪುರದಲ್ಲಿ ಭೀಕರ ರಸ್ತೆ ಅಪಘಾತ: 6 ಕೂಲಿ ಕಾರ್ಮಿಕರು ಸಾವು
ಈ ಬಳಿಕ ಅವನೀಶ್ ಶರ್ಮಾ ಹಾಗೂ ಗೌರವ್ ಶರ್ಮಾ ಕುಟುಂಬಗಳ ನಡುವೆ ವೈಷಮ್ಯ ಬೆಳೆದಿತ್ತು. ನಿನ್ನೆ ಆಕಸ್ಮಿಕವಾಗಿ ಎರಡು ಕುಟುಂಬಗಳ ಕೆಲ ಸದಸ್ಯರು ದೇವಸ್ಥಾನವೊಂದರಲ್ಲಿ ಭೇಟಿಯಾಗಿದ್ದು, ಹಳೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಕೋಪಗೊಂಡ ಗೌರವ್ ಶರ್ಮಾ, ಅವನೀಶ್ ಶರ್ಮಾ ಮೇಲೆ ಗುಂಡು ಹಾರಿಸಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಗೌರವ್ ಶರ್ಮಾ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಸೂಕ್ತ ಕ್ರಮಕ್ಕೆ ಸಿಎಂ ಯೋಗಿ ಆದೇಶ
ಘಟನೆಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೇಸ್ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.