ಜಾಗ್ರಾಂವ್ (ಪಂಜಾಬ್): ಮಾದಕವಸ್ತು ಕಳ್ಳಸಾಗಣೆದಾರರು ಪಂಜಾಬ್ನ ಜಾಗ್ರಾಂವ್ನಲ್ಲಿ ಇಬ್ಬರು ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ಗಳನ್ನು (ಎಎಸ್‌ಐ) ಗುಂಡಿಕ್ಕಿ ಹತೈಗೈದು ಪರಾರಿಯಾಗಿದ್ದಾರೆ.
ಘಟನೆ ವೇಳೆ ಮತ್ತೊಬ್ಬ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದಾರೆ. ಕೃತ್ಯವನ್ನು ತಮ್ಮ ಫೋನ್‌ಗಳಲ್ಲಿ ಸೆರೆಹಿಡಿಯಲು ಯತ್ನಿಸಿದ ಯುವಕರ ಗುಂಪಿನ ಮೇಲೂ ಆರೋಪಿಗಳು ಗುಂಡು ಹಾರಿಸಿದ್ದಾರೆ. ಆದರೆ ಯುವಕರು ಅಪಾಯದಿಂದ ಪಾರಾಗಿದ್ದಾರೆ.
ದಾಳಿ ಹೀಗೆ ನಡೆಯಿತು..
ಡ್ರಗ್ ಸ್ಮಗ್ಲರ್ಸ್ ಬರುತ್ತಾರೆಂಬ ನಿಖರ ಮಾಹಿತಿ ಮೇರೆಗೆ ಜಾಗ್ರಾಂವ್ನ ಹೊಸ ಧಾನ್ಯ ಮಾರುಕಟ್ಟೆಯಲ್ಲಿ ಪೊಲೀಸರು ಕಾಯುತ್ತಿದ್ದರು. ನಿನ್ನ ಸಂಜೆ ಸುಮಾರು 6.30ರ ವೇಳೆ ಕಾರಿನಲ್ಲಿ ಬಂದ ಆರೋಪಿಗಳು ಟ್ರಕ್ವೊಂದರಿಂದ ಡ್ರಕ್ ಪ್ಯಾಕೆಟ್‌ಗಳನ್ನು ತಮ್ಮ ಕಾರಿಗೆ ವರ್ಗಾಯಿಸುವುದನ್ನು ಪೊಲೀಸರು ನೋಡುತ್ತಾರೆ. ದಾಳಿ ನಡೆಸಿದ ಪೊಲೀಸರು ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಅವರು ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾರೆ.
ಎಎಸ್ಐ ಭಗವಾನ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಎಸ್ಐ ದಲ್ವಿಂದರ್ ಸಿಂಗ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ ಎಂದು ಜಾಗ್ರಾಂವ್ ಡಿಎಸ್ಪಿ ಜತೀಂದರ್ಜಿತ್ ಸಿಂಗ್ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳನ್ನು ಕೊಂದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಈ ದುಃಖದ ಸಮಯದಲ್ಲಿ ಮೃತ ಪೊಲೀಸರ ಕುಟುಂಬದೊಂದಿಗೆ ನಾವಿರುತ್ತೇವೆ ಎಂದು ಪಂಜಾಬ್ ಪೊಲೀಸರು ಟ್ವೀಟ್ ಮಾಡಿದ್ದಾರೆ.