ನವದೆಹಲಿ: ಉದ್ಯಮಿಯೊಬ್ಬರಿಂದ ಸುಮಾರು 2 ಕೋಟಿ ರೂಪಾಯಿ ದರೋಡೆ ಮಾಡಿ ನಾಲ್ವರು ಕಳ್ಳರು ಪರಾರಿಯಾಗಿರುವ ಘಟನೆ ಉತ್ತರ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ. ನಾಲ್ವರು ಕಳ್ಳರು ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 29 ರಂದು ರಾತ್ರಿ 9.14 ಕ್ಕೆ ಘಟನೆ ನಡೆದಿದ್ದು, ಬೆಳಕಿಗೆ ಬಂದಿದೆ. ಉಕ್ಕಿನ ಪೈಪ್ ಕಾರ್ಖಾನೆ ಮಾಲೀಕ ಕರಣ್ ಅಗರ್ವಾಲ್ ತನ್ನ ಚಾಲಕ ಧರ್ಮೇಂದರ್ ಕುಮಾರ್ ಜೊತೆಗೆ ಚಾಂದಿನಿ ಚೌಕ್‌ನಿಂದ ತನ್ನ ಸೋದರಳಿಯ ಮನೆಗೆ ಹೋಗುತ್ತಿದ್ದಾಗ ಕಾರು ಅಡ್ಡಗಟ್ಟಿ ದರೋಡೆ ಮಾಡಲಾಗಿದೆ. ಕರಣ್ ಅಗರ್ವಾಲ್ ಬಳಿ ಸುಮಾರು 1,97,00,000 ರೂಪಾಯಿಗಳು ಇತ್ತು ಎನ್ನಲಾಗಿದೆ.
ಕಾರು ಸೆಕ್ಟರ್ 24, ರೋಹಿಣಿ ಬಳಿ ತಲುಪಿದಾಗ ಅಪರಿಚಿತ ವ್ಯಕ್ತಿಯೊಬ್ಬರು ಸ್ಕೂಟಿಯಲ್ಲಿ ಬಂದು ಕಾರಿಗೆ ಅಡ್ಡಿಪಡಿಸಿದ್ದಾರೆ. ಈ ವೇಳೆ, ಜಗಳವಾಗಿ ವಾಗ್ವಾದಕ್ಕೆ ಇಳಿದಿದ್ದಾರೆ. ಕೇವಲ ಒಂದೇ ನಿಮಿಷದಲ್ಲಿ ಸ್ಥಳಕ್ಕೆ ಮತ್ತೆ ಮೂವರು ಬಂದು ಅವರಲ್ಲೊಬ್ಬ ಕಾರು ಚಾಲಕ ಕೂರುವ ಡೋರ್‌ನ ಕಿಟಕಿ ಒಡೆದು ಮೊದಲು ಕಾರಿನ ಕೀ ಕಸಿದುಕೊಂಡಿದ್ದಾನೆ ಎಂದು ಡಿಸಿಪಿ ರೋಹಿಣಿ ಪ್ರಣವ್ ತಾಯಲ್ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾಲ್ವರು ಆರೋಪಿಗಳು ಕಾರಿನ ಡಿಕ್ಕಿ ತೆರೆದು ಮೂರು ಚೀಲಗಳಲ್ಲಿ ಇರಿಸಲಾಗಿದ್ದ ಎಲ್ಲ ಹಣವನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ಬುಧ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 392 (ದರೋಡೆ) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ.
ಇದನ್ನೂ ಓದಿ:ಪಾದಚಾರಿ ಮೇಲೆ ಕಾರು ಹರಿಸಿದ ಯುವಕ... ಆರೋಪಿ ಸೆರೆ ಹಿಡಿದ ಪೊಲೀಸರು