ದಾವಣಗೆರೆ/ಪುತ್ತೂರು: ಮನೆಯ ಇ-ಸ್ವತ್ತು ಸಂಬಂಧ ಅಳತೆ ಮಾಡಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಡಿಎಲ್ಆರ್(ಭೂ ದಾಖಲೆಗಳ ಸಹಾಯಕ ನಿರ್ದೇಶಕ) ಕಚೇರಿಯ ಸರ್ವೇಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮನೆಯ ಸರ್ವೇ ಮಾಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಎಡಿಎಲ್ಆರ್ ಕಚೇರಿಯ ಸರ್ವೇಯರ್ ಉದಯ್ ಚೌಧರಿ ಬಿನ್ ಮಹಾಸ್ವಾಮಿ ಬಿಎನ್ ಲಂಚ ಸ್ವೀಕರಿಸುವಾಗ ದಾಳಿ ನಡೆಸಿ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಎಡಿಎಲ್ಆರ್ ಕಚೇರಿಯಲ್ಲಿ ಸರ್ವೇಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಾವಣಗೆರೆ ನಗರದ ಅವರಗೆರೆ ಟೀಚರ್ ಕಾಲೋನಿಯ ನಿವಾಸಿಯಾದ ಉದಯ್ ಚೌಧರಿ ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೇವೆಂದ್ರ ಗೌಡ ಜಿ.ಎಸ್, ಶಿವಮೂರ್ತಿ ಹೆಚ್ ಜಿ ಇವರು ತಮ್ಮ ಹೊನ್ನಾಳಿ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಇರುವ ತಮ್ಮ ಮನೆಯ ಇ-ಸ್ವತ್ತು ಸಂಬಂಧ ಅಳತೆ ಮಾಡಿ ಕೊಡಲು ಸರ್ವೇಯರ್ ಉದಯ್ ಚೌಧರಿ ಬಳಿ ಮನವಿ ಸಲ್ಲಿಸಿದ್ದರು. ಮನೆಯ ಅಳತೆ ಮಾಡಿಕೊಡಲು ಎಡಿಎಲ್ಆರ್ ಕಚೇರಿಯ ಸರ್ವೇಯರ್ ಉದಯ್ ಚೌಧರಿ 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ, ಮನೆ ಮಾಲೀಕ ದೇವೆಂದ್ರ ಗೌಡ ಜಿ.ಎಸ್ 3 ಸಾವಿರ ಲಂಚದ ಹಣವನ್ನು ಹೊನ್ನಾಳಿ ಶಿವಮೊಗ್ಗ ರಸ್ತೆಯಲ್ಲಿರುವ ಸಾಯಿ ಫ್ಯುವಲ್ ಸ್ಟೇಷನ್ ಬಳಿ ಪಡೆಯುವಾಗ ದಾವಣಗೆರೆ ಲೋಕಾಯುಕ್ತ ಅಧಿಕಾರಿಗಳು ದಿಢೀರನೆ ದಾಳಿ ನಡೆಸಿ ಸರ್ವೇಯರ್ ಉದಯ್ ಚೌಧರಿಯನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು, ಈ ದಾಳಿಯನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ.ಎಸ್ ಕೌಲಾಪುರೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಶ್ರೀ ರಾಷ್ಟ್ರಪತಿ ಹೆಚ್.ಎಸ್ ಮತ್ತು ಶ್ರೀ ಆಂಜನೇಯ ಎನ್.ಹೆಚ್ ನೇತೃತ್ವದಲ್ಲಿ ಸಿಬ್ಬಂದಿಗಳೊಂದಿಗೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.