ಹೈದರಾಬಾದ್: ಆನ್ಲೈನ್ ವಂಚನೆಗಳ ಬಗ್ಗೆ ಜನರಿಗೆ ಸರ್ಕಾರ, ಬ್ಯಾಂಕ್ಗಳು ಸಾಕಷ್ಟು ಎಚ್ಚರಿಕೆಯನ್ನೂ ನೀಡಿದರೂ ಸೈಬರ್ ಅಪರಾಧ ಪ್ರಕರಣಗಳಲ್ಲಿ ಮಾತ್ರ ಯಾವುದೇ ಇಳಿಕೆ ಕಂಡು ಬಂದಿಲ್ಲ. ಇಂತಹ ಸೈಬರ್ ಅಪರಾಧಿಗಳು ಇದೀಗ ಡ್ರಗ್ಸ್ ಜಾಲದ ಹೆಸರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಯುವತಿಯೊಬ್ಬಳಿಗೆ ವಂಚಿಸಿರುವ ಘಟನೆ ಸೈಬರ್ ಸಿಟಿ ಹೈದರಾಬಾದ್ನಲ್ಲಿ ನಡೆದಿದೆ. ಯುವತಿಗೆ ಬಂದ ಪಾರ್ಸೆಲ್ನಲ್ಲಿ ಡ್ರಗ್ಸ್ ಇದೆ ಎಂದು ಆರೋಪಿಸಿ, ಆಕೆಗೆ ಬೆದರಿಸಿ ಅವರಿಂದ ಸೈಬರ್ ಅಪರಾಧಿಗಳು 18 ಲಕ್ಷ ರೂ. ಹಣವನ್ನು ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಡ್ರಗ್ಸ್ ಪತ್ತೆಯಾದ ಹಿನ್ನೆಲೆ ಯಾವುದೇ ಪ್ರಕರಣ ದಾಖಲಾಗದಂತೆ ರಹಸ್ಯ ಒಪ್ಪಂದ ಮಾಡುವುದಾಗಿ ಅವರು ಯುವತಿಗೆ ತಿಳಿಸಿ, ಈ ಮೊತ್ತದ ಹಣವನ್ನು ಲಪಟಾಯಿಸಿದ್ದಾರೆ.
ಯುವತಿಯ ಚಲನವಲನ ಪತ್ತೆ: ಹೈದರಾಬಾದ್ನ ಎಲ್ಬಿ ನಗರದ ಐಟಿ ಕಂಪನಿಯಲ್ಲಿ ಯುವತಿಯೊಬ್ಬರು ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ತಿಂಗಳು ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ಅಪರಾಧಿಗಳು ಯುವತಿಗೆ ಕರೆ ಮಾಡಿದ್ದಾರೆ. ಅಲ್ಲದೇ, ಈ ಸಂಬಂದ ಪ್ರಕರಣ ದಾಖಲಾಗಿದೆ ಎಂದಿದ್ದಾರೆ. ಈ ವೇಳೆ ಯುವತಿ ತನಗೆ ಬಂದ ಪಾರ್ಸೆಲ್ನಲ್ಲಿ ಯಾವುದೇ ಡ್ರಗ್ಸ್ ಇಲ್ಲ ಎಂದು ಕಾಲ್ ಕಟ್ ಮಾಡಿದ್ದಾರೆ. ಆಗಲೂ ಬಿಡದ ಸೈಬರ್ ಅಪರಾಧಿ ಮತ್ತೆ ಯುವತಿಗೆ ಕರೆ ಮಾಡಿ, ಎಫ್ಐಆರ್ ದಾಖಲಾಗಬಾರದು ಎಂದರೆ ಸಿಬಿಐ ಅಧಿಕಾರಿಗಳೊಂದಿಗೆ ತಾವು ಮಾತನಾಡಬೇಕು. ಈ ಹಿನ್ನೆಲೆ ರಹಸ್ಯ ಒಪ್ಪಂದ ಮಾಡಿಕೊಳ್ಳೊಣ ಎಂದಿದ್ದರು ಎಂದು ರಾಚಕೊಂಡ ಸೈಬರ್ ಅಪರಾಧ ದಳದ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಬಿಐ ಅಧಿಕಾರಿ ಸೋಗಿನಲ್ಲಿ ಲೂಟಿ: ಇದಾದ ಕೆಲವೇ ನಿಮಿಷದಲ್ಲಿ ಮತ್ತೊಬ್ಬ ಯುವತಿ ಬೇರೊಂದು ನಂಬರ್ನಿಂದ ಕರೆ ಮಾಡಿದ್ದಾನೆ. ಈತ ತಾನು ಸಿಬಿಐನಲ್ಲಿ ಕಾರ್ಯ ನಿರ್ವಹಿಸುವುದಾಗಿ ಯುವತಿಯನ್ನು ನಂಬಿಸಿದ್ದಾನೆ. ಅಲ್ಲದೇ, ಡ್ರಗ್ಸ್ ಪತ್ತೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಬಾರದು ಎಂದರೆ ನೀವು ನಾವು ಹೇಳಿದಂತೆ ಕೇಳಬೇಕಾಗುತ್ತದೆ. ನಮ್ಮ ಜೊತೆ ಒಪ್ಪಂದ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದನಂತೆ. ಇದಕ್ಕಾಗಿ ಒಂದು ಅಷ್ಟೂ ಹಣವನ್ನು ನೀಡುವಂತೆ ಯುವತಿಗೆ ಕೇಳಿದ್ದಾನೆ. ಅಲ್ಲದೇ, ತಾನು ಸಿಬಿಐ ಅಧಿಕಾರಿ ಎಂದು ನಂಬಿಸಲು, ಸಿಬಿಐ ಅಧಿಕಾರಿ ಅಂತಾ ಇರುವ ಐಡಿ ಕಾರ್ಡ್ನ್ನು ಕೂಡ ಯುವತಿಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಿ ನಂಬಿಕೆ ಬರುವಂತೆ ಮಾಡಿದ್ದಾನೆ.