ನವದೆಹಲಿ:ಗುಪ್ತಚರ ಇಲಾಖೆ ನಿರ್ದೇಶಕರ ಮನೆಯಲ್ಲಿ ನಿಯೋಜನೆಗೊಂಡಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶುಕ್ರವಾರ ಸಂಜೆ 4.15ಕ್ಕೆ ಈ ಘಟನೆ ನಡೆದಿದ್ದು, 53 ವರ್ಷದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ರಾಜ್ಬಿರ್ ಕುಮಾರ್ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಇನ್ನು, ಸ್ಥಳದಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದ ಯಾವುದೇ ಡೆತ್ನೋಟ್ ಪತ್ತೆ ಆಗಿಲ್ಲ. ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಶನಿವಾರ ನಡೆಸಲಾಗಿದ್ದು, ಅವರ ಕುಟುಂಬಕ್ಕೆ ದೇಹವನ್ನು ಒಪ್ಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈನಲ್ಲಿ ನಡೆದಿತ್ತು ಇದೇ ರೀತಿ ಪ್ರಕರಣ: ಕಳೆದ ಜುಲೈನಲ್ಲಿ ಸಿಆರ್ಪಿಎಫ್ ಕಾನ್ಸ್ಟೇಬಲ್ ನರೇಶ್ ಜಾಟ್ ಕೂಡ ತಮ್ಮ ಇದೇ ರೀತಿ ಆತ್ಮಹತ್ಯೆಗೆ ಶರಣಾಗಿದ್ದರು. ಜಾಟ್ ಸಾಯುವ ಮುನ್ನ ಅವರು ಹೆಂಡತಿ ಮತ್ತು ಮಗಳೊಂದಿಗೆ 18ಗಂಟೆಗಳ ಕಾಲ ತಮ್ಮನ್ನು ಕೊಠಡಿಯಲ್ಲಿ ಕೂಡಿ ಹಾಕಿಕೊಂಡಿದ್ದರು. ಇನ್ನು ಜಾಟ್ ಸಾವಿನ ಬೆನ್ನಲ್ಲೇ ಅವರ ಮಗಳ ಶಿಕ್ಷಣದ ವೆಚ್ಚವನ್ನು 12ನೇ ತರಗತಿವರೆಗೆ ಸಿಆರ್ಪಿಎಫ್ ಭರಿಸುವುದಾಗಿ ತಿಳಿಸಿತ್ತು. ಅಲ್ಲದೇ ಸಂತ್ರಸ್ತ ಹೆಂಡತಿ ಮತ್ತೊಂದು ಮದುವೆಯಾಗುವವರೆಗೂ ಪಿಂಚಣಿ ನೀಡಲು ಮತ್ತು ಸಂತ್ರಸ್ತರ ಕುಟುಂಬ ಸರ್ಕಾರಿ ಮನೆಯಲ್ಲಿ ಇರಲು ಯಾವುದೇ ಅಡ್ಡಿ ಇರುವುದಿಲ್ಲ ಎಂಬುದಕ್ಕೆ ಸಿಆರ್ಪಿಎಫ್ ಒಪ್ಪಿಗೆ ನೀಡಿತ್ತು.
ಟಾಸ್ಕ್ ಫೋರ್ಸ್ ರಚನೆ: ಸಿಆರ್ಪಿಎಫ್ ಯೋಧರು ಸಾವಿಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಗೃಹ ಸಚಿವಾಲಯದಿಂದ ಟಾಸ್ಕ್ ಫೋರ್ಸ್ ಅನ್ನು ಕೂಡ ನೇಮಕ ಮಾಡಲಾಗಿತ್ತು. ಟಾಸ್ಕ್ ಫೋರ್ಸ್ ಹಿರಿಯ ಅಧಿಕಾರಿಗಳು ಸೇರಿದಂತೆ ಇಲಾಖೆ ಸಿಬ್ಬಂದಿಗಳು ಯೋಧರ ವಿರುದ್ಧ ಅವಾಚ್ಯ ಶಬ್ಧ, ಬೆದರಿಕೆ ಮತ್ತು ಕೆಲಸದ ಸ್ಥಳದಲ್ಲಿ ಅವಮಾನ ಮಾಡದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು. ಜೊತೆಗೆ ಪಾರದರ್ಶಕ ವರ್ಗಾವಣೆ ನಿಯಮವನ್ನು ಪಾಲಿಸಲು ಕೂಡ ಆದೇಶ ಹೊರಡಿಸಲಾಗಿತ್ತು.