ಮುಂಬೈ (ಮಹಾರಾಷ್ಟ್ರ) :ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಮನೆಯಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ಗುರುವಾರ ಮಾಹಿತಿ ನೀಡಿದರು. ಕಳೆದ ವಾರ ಜುಹುವಿನಲ್ಲಿರುವ ನಟಿಯ ನಿವಾಸದಿಂದ ಬೆಲೆಬಾಳುವ ವಸ್ತುಗಳು ಕಳುವಾಗಿದ್ದವು.
ಜುಹು ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲು ಮಾಡಲಾಗಿತ್ತು. ಪ್ರಕರಣ ಸಂಬಂಧ ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತರ ವಿಚಾರಣೆ ನಡೆಯುತ್ತಿದೆ. ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಚಿತ್ರೀಕರಣದಿಂದ ಸ್ವಲ್ಪ ಬಿಡುವು ಮಾಡಿಕೊಂಡಿರುವ ಶಿಲ್ಪಾ ಶೆಟ್ಟಿ ಸದ್ಯ ಇಟಲಿಯಲ್ಲಿ ಇದ್ದಾರೆ. ಅಲ್ಲಿಯ ಖುಷಿ ಘಳಿಗೆಗಳ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 48 ವರ್ಷದ ನಟಿಯ ಗ್ಲಾಮರ್ ಫೋಟೋ ನೋಡಿದ ನೆಟಿಜನ್ಸ್ ಫಿದಾ ಆಗಿದ್ದಾರೆ. ಮೊನೊಕಿನಿಯಲ್ಲಿ ಕಳೆದ ಸುಂದರ ಕ್ಷಣಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಇಬ್ಬರು ಮಕ್ಕಳ ತಾಯಿ. ನಿಮ್ಮ ಈ ಸೌಂದರ್ಯದ ಗುಟ್ಟೇನು?, ದಯವಿಟ್ಟು ತಿಳಿಸಿಕೊಡಿ ಎಂದು ನೆಟಿಜನ್ವೊಬ್ಬರು ಕಾಮೆಂಟ್ ಮಾಡಿದ್ದಾರೆ.
ಶಿಲ್ಪಾ ಶೆಟ್ಟಿ ಕೇವಲ ಸಿನಿಮಾದಿಂದ ಮಾತ್ರ ಗುರುತಿಸಿಕೊಂಡವರಲ್ಲ. ಚಿತ್ರರಂಗದಲ್ಲಿ ಸಕ್ರಿಯವಾಗಿರುವುದರ ಜೊತೆಗೆ ಫ್ಯಾಷನ್, ಫಿಟ್ನೆಸ್ ಕ್ಷೇತ್ರದಲ್ಲಿಯೂ ಅವರ ಹೆಸರು ಈಗಲೂ ಚಾಲ್ತಿಯಲ್ಲಿದೆ. ಬಾಲಿವುಡ್ನಲ್ಲಿ ತಮ್ಮದೇ ಆದ ಟ್ರೆಂಡ್ ಕ್ರಿಯೆಟ್ ಮಾಡಿರುವ ಇವರು ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದವರು. 2009ರಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರೊಂದಿಗೆ ವಿವಾಹವಾದ ಶಿಲ್ಪಾ ಶೆಟ್ಟಿ ದಂಪತಿಗೆ, ಸಮೀಶಾ ಮತ್ತು ವಿಯಾನ್ ರಾಜ್ ಎಂಬ ಇಬ್ಬರು ಪುತ್ರರು ಇದ್ದಾರೆ. ಸದ್ಯಕ್ಕೆ ರಿಯಾಲಿಟಿ ಶೋಗಳಲ್ಲಿ ಅಭಿನಯಿಸುತ್ತಿದ್ದಾರೆ.
ಕನ್ನಡ, ಹಿಂದಿ, ತೆಲುಗು ಸೇರಿದಂತೆ ಹಲವು ಬಾಷೆಗಳಲ್ಲಿ ನಟಿಸಿದ್ದು ಕಳೆದ ಹಲವು ದಿನಗಳ ಕಾಲ ಬಣ್ಣದ ಲೋಕದಿಂದ ದೂರವಾಗಿದ್ದರು. 14 ವರ್ಷಗಳ ನಂತರ ಹಂಗಾಮಾ 2 ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಇದಾದ ಬಳಿಕ ಕನ್ನಡ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಕನ್ನಡ 'ಕೆಡಿ' ಸಿನಿಮಾದಲ್ಲಿ ರಾಣಿ ಸತ್ಯವತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 17 ವರ್ಷದ ಬಳಿಕ ಶಿಲ್ಪಾ ಕನ್ನಡಕ್ಕೆ ಬಂದಿದ್ದಾರೆ.
ಕನ್ನಡದಲ್ಲಿ ರವಿಚಂದ್ರನ್ ಅಭಿನಯದ ಪ್ರೀತ್ಸೋದ್ ತಪ್ಪಾ? ಚಿತ್ರದಲ್ಲಿ ಅಭಿನಯಿಸಿದ್ದ ಶಿಲ್ಪಾ ಒಂದಾಗೋಣ ಬಾ, ಉಪೇಂದ್ರ ಅವರ ಅಟೋ ಶಂಕರ್ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಅಭಿನಯ ಮಾಡಿದ್ದರು. ಬಹಳ ದಿನಗಳ ನಂತರ ಕನ್ನಡ ಸಿನಿಮಾರಂಗಕ್ಕೆ ಮರಳಿದ್ದಕ್ಕೆ ಕನ್ನಡಿಗರೂ ಖುಷಿ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಫಿಟ್ನೆಸ್ ಐಕಾನ್ ಶಿಲ್ಪಾ ಶೆಟ್ಟಿ ಬರ್ತಡೇ: ವಯಸ್ಸು 48 ಆದ್ರೂ ಮಾಸದ ಸೌಂದರ್ಯ