ಕರ್ನಾಟಕ

karnataka

ETV Bharat / crime

ನಕಲಿ ಪಾಸ್​​ಪೋರ್ಟ್ ಹೊಂದಿದ್ದ ವ್ಯಕ್ತಿಗೆ ಒಂದು ವರ್ಷ ಸಜೆ - Court punishment to fake passport

ಆರೋಪಿ ನಾಸಿರ್ ಹುಸೇನ್ ವಿದೇಶದಲ್ಲಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯವರು ಆತನ ಪಾಸ್​​ಪೋರ್ಟ್ ತೆಗೆದಿರಿಸಿದ್ದರು. ಇದರಿಂದ ಆತ ಔಟ್ ಪಾಸ್​​ನಲ್ಲಿ ಸ್ವದೇಶಕ್ಕೆ ವಾಪಸ್ ಬಂದಿದ್ದ.

Fake passports
Fake passports

By

Published : Apr 8, 2021, 4:12 PM IST

ಮಂಗಳೂರು: ನಕಲಿ ಪಾಸ್​​ಪೋರ್ಟ್ ಪ್ರಕರಣವೊಂದರಲ್ಲಿ ಆರೋಪಿತನಾಗಿದ್ದ ವ್ಯಕ್ತಿಯ ಮೇಲಿನ ಆರೋಪ ಸಾಬೀತುಗೊಂಡ ಹಿನ್ನೆಲೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಒಂದು ವರ್ಷ ಸಾದಾ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಬಂಟ್ವಾಳ ತಾಲೂಕಿನ ಕೆಳಗಿನ ಪೇಟೆಯ ನಿವಾಸಿ ನಾಸಿರ್ ಹುಸೇನ್ (41) ಶಿಕ್ಷೆಗೊಳಗಾದ ಆರೋಪಿ.

ಆರೋಪಿ ನಾಸಿರ್ ಹುಸೇನ್ ವಿದೇಶದಲ್ಲಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯವರು ಆತನ ಪಾಸ್​ಪೋರ್ಟ್​ ತೆಗೆದಿರಿಸಿದ್ದರು. ಇದರಿಂದ ಆತ ಔಟ್ ಪಾಸ್​​ನಲ್ಲಿ ಸ್ವದೇಶಕ್ಕೆ ವಾಪಸ್ ಬಂದಿದ್ದ.

2019ರ ಮಾ. 18ರಂದು ನಕಲಿ ಪಾಸ್​ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಯತ್ನಿಸಿದ್ದ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈತನ ಪಾಸ್​​ಪೋರ್ಟ್ ಬಗ್ಗೆ ಅನುಮಾನಗೊಂಡ ಅಂದಿನ ಇಮಿಗ್ರೇಷನ್ ಅಧಿಕಾರಿ ಮಂಜುನಾಥ ಶೆಟ್ಟಿಯವರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ತಕ್ಷಣ ಆರೋಪಿ ನಾಸಿರ್ ಹುಸೇನ್​​ನನ್ನು ಬಂಧಿಸಿದ ಪೊಲೀಸರು, ಇಮಿಗ್ರೇಷನ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಒಂದನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದು ಆರೋಪಿಯನ್ನು ಬಿಡುಗಡೆ ಮಾಡಲಾಗಿತ್ತು.

ನ್ಯಾಯಾಲಯದ ಆದೇಶದ ಬಗ್ಗೆ ಸರ್ಕಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಇದನ್ನು ನ್ಯಾಯಾಲಯ ಪುರಸ್ಕರಿಸಿತ್ತು.

ಪ್ರಕರಣವನ್ನು ಕೈಗೆತ್ತಿಗೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಮುರಳೀಧರ ಪೈಯವರು ಒಂದನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯದ ತೀರ್ಪನ್ನು ಬದಲಾಯಿಸಿ ವಂಚನೆ, ಫೋರ್ಜರಿ, ಸುಳ್ಳು ದಾಖಲಾತಿ ಸೃಷ್ಟಿ‌ ಹಾಗೂ ಪಾಸ್​​ಪೋರ್ಟ್ ಕಾಯ್ದೆಯಡಿಯಲ್ಲಿ ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ಒಂದು ವರ್ಷ ಸಾದಾ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದಾರೆ.

ABOUT THE AUTHOR

...view details