ಭೋಪಾಲ್ (ಮಧ್ಯಪ್ರದೇಶ): ಕೊರೊನಾ ಸೋಂಕಿಗೆ ಒಳಗಾಗಿ ಮಧ್ಯಪ್ರದೇಶದ ಭೋಪಾಲ್ನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮೇಲೆ ಪುರುಷ ನರ್ಸ್ ಒಬ್ಬ ಅತ್ಯಾಚಾರ ಎಸಗಿದ್ದು, 24 ಗಂಟೆಗಳಲ್ಲೇ ಸಂತ್ರಸ್ತೆ ಕೊನೆಯುಸಿರೆಳೆದಿದ್ದಾರೆ.
ಭೋಪಾಲ್ ಮೆಮೋರಿಯಲ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಒಂದು ತಿಂಗಳ ಮುಂಚೆಯೇ ಘಟನೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 6 ರಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿ, ವೈದ್ಯರ ಬಳಿ ಆರೋಪಿ ಯಾರೆಂಬ ಸುಳಿವು ನೀಡಿದ್ದರು. ಆದರೆ ತಕ್ಷಣವೇ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಅವರು ಅದೇ ದಿನ ಸಂಜೆ ಮೃತಪಟ್ಟಿದ್ದರು.
ಇದನ್ನೂ ಓದಿ: ಅತ್ಯಾಚಾರದ ವೇಳೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಎಸ್ಐ.. ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ ಯತ್ನ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ನರ್ಸ್ ಸಂತೋಷ್ ಅಹಿರ್ವಾರ್ನನ್ನು ಬಂಧಿಸಿದ್ದಾರೆ. ಸಂತ್ರಸ್ತೆ ದೂರಿನಲ್ಲಿ ತನ್ನ ಗುರುತು ಬಹಿರಂಗವಾಗಬಾರದೆಂದು ತಿಳಿಸಿದ್ದರು. ಹೀಗಾಗಿ ತನಿಖಾ ತಂಡವನ್ನು ಹೊರತುಪಡಿಸಿ ಯಾರೊಂದಿಗೂ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಇರ್ಷಾದ್ ವಾಲಿ ಹೇಳಿದ್ದಾರೆ.
ಇನ್ನು ಆರೋಪಿಯು ಈ ಹಿಂದೆ 24 ವರ್ಷದ ಸ್ಟಾಫ್ ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಮತ್ತು ಕರ್ತವ್ಯದಲ್ಲಿದ್ದಾಗ ಮದ್ಯ ಸೇವಿಸಿದ್ದಕ್ಕಾಗಿ ಆತನನ್ನು ಕೆಲಕಾಲ ಅಮಾನತು ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.