ಇಂದೋರ್:ಕಾಂಗ್ರೆಸ್ ಮುಖಂಡ ವಿಜೇಂದರ್ ಚೌಹಾಣ್ ಅವರ ಆರು ವರ್ಷದ ಸೋದರಳಿಯ ಹರ್ಷ್ ಸಿಂಗ್ ಚೌಹಾಣ್ ಅವರನ್ನು ಭಾನುವಾರ ಸಂಜೆ ಮ್ಹೋವ್‌ನ ಕಿಶನ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಪಿಗ್ದಂಬರ್ ಗ್ರಾಮದಿಂದ ಕಿಡ್ನಾಪ್ ಮಾಡಿ ಕೊಲೆ ಮಾಡಲಾಗಿದೆ. ಮಗುವನ್ನು ಬಿಡುಗಡೆ ಮಾಡಲು ಅಪಹರಣಕಾರರು 4 ಕೋಟಿ ರೂಪಾಯಿ ಒತ್ತೆ ಹಣ ಕೇಳಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸಿಮ್ರೋಲ್ ಪ್ರದೇಶದ ಅರಣ್ಯದಿಂದ ಬಾಲಕ ಹರ್ಷನ ದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ನಾಲ್ಕು ಕೋಟಿಗೆ ಬೇಡಿಕೆ ಇಟ್ಟಿದ್ದ ಅಪಹರಣಕಾರರು:ಗಣಿ ಉದ್ಯಮಿ ಜಿತೇಂದ್ರ ಸಿಂಗ್ ಚೌಹಾಣ್ ಅವರ ಪುತ್ರನಾಗಿದ್ದ ಹರ್ಷ್ ತಮ್ಮ ಮನೆಯ ಹೊರಗೆ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಸಂಬಂಧಿಕರು ಮನೆ ಹತ್ತಿರ ಹಾಗೂ ಸುತ್ತಮುತ್ತಲಿನ ಎಲ್ಲ ಪ್ರದೇಶಗಳಲ್ಲಿ ಹುಡುಕಾಡಿದರೂ ಬಾಲಕ ಪತ್ತೆಯಾಗಿರಲಿಲ್ಲ. ಹೀಗಾಗಿ ಗಾಬರಿಯಾದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಕಾಂಗ್ರೆಸ್ ಮುಖಂಡ ಚೌಹಾಣ್ ಅವರಿಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ತನ್ನ ಸೋದರಳಿಯನ ಬಿಡುಗಡೆಗಾಗಿ 4 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿತ್ತು. ಆದರೆ ಇನ್ನಷ್ಟು ಮಾತನಾಡುವ ಮೊದಲೇ ಕರೆ ಸಂಪರ್ಕ ಕಡಿತಗೊಂಡಿತ್ತು.
ಸಿಸಿಟಿವಿಯಲ್ಲಿ ಅಪಹರಣಕಾರರ ದೃಶ್ಯ ಸೆರೆ:ಮಾಹಿತಿ ಪ್ರಕಾರ ಆರು ಗಂಟೆ ಸುಮಾರಿಗೆ ಹರ್ಷ ಚೌಹಾಣ್ ನಾಪತ್ತೆಯಾಗಿದ್ದ. ಮಗುವಿಗಾಗಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರು. ನಂತರ ರಾತ್ರಿ ಎಂಟು ಗಂಟೆಗೆ ಅಪಹರಣಕಾರರ ಕರೆ ಬಂದಿತ್ತು. ಒತ್ತೆ ಹಣಕ್ಕಾಗಿ ಬೇಡಿಕೆ ಇಟ್ಟ ಕರೆ ಬಂದ ನಂತರ ಚೌಹಾಣ್ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿ ಬಾಲಕನ ಶವವನ್ನು ಬರ್ವಾ ಅರಣ್ಯದಲ್ಲಿ ಪತ್ತೆ ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಅಪಹರಣಕಾರರ ದೃಶ್ಯ ಸೆರೆಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.