ದಿಂಡುಗಲ್(ತಮಿಳುನಾಡು): ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಪೋಸ್ಟ್ ಮಾಡಿದ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆಂದು ಸೇಡು ತೀರಿಸಿಕೊಳ್ಳಲು ವಿದ್ಯಾರ್ಥಿಯೊಬ್ಬ 6 ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ದಿಂಡುಗಲ್ ಜಿಲ್ಲೆಯ ನಾಥಂ ಸಮೀಪದ ಕೊಟ್ಟಾಯೂರಿನಲ್ಲಿ ನಡೆದಿದೆ. ಹರಿಹರ ದೀಪನ್ (6) ಮೃತ ದುರ್ದೈವಿಯಾಗಿದ್ದು, ಆರೋಪಿ ಅಜಯ್ ರತ್ನಂನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಅಜಯ್ ರತ್ನಂ ಕೆಲವು ವಾರಗಳ ಹಿಂದೆ ಮೃತ ಬಾಲಕ ಹರಿಹರ ದೀಪನ್ ಅವರ ಸಹೋದರಿಯ ಫೋಟೋವನ್ನು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಬಗ್ಗೆ ದೀಪನ್ ತಂದೆ ರಾಮಕೃಷ್ಣನ್ ಅಜಯ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರಿಂದ ಕುಪಿತಗೊಂಡ ಆರೋಪಿ, ರಾಮಕೃಷ್ಣನ್ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳಲು ಹರಿಹರ ದೀಪನ್ ಅವರನ್ನು ಊರಿನ ಹೊರಗಡೆ ಕರೆದೊಯ್ದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.