ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಎಸ್ಎಸ್ಸಿ)ದ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಾಗಿರುವ ಮಾಜಿ ಶಿಕ್ಷಣ ಸಚಿವ ಮತ್ತು ಹಾಲಿ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ಅವರ ಅರೆಸ್ಟ್ ಮೆಮೋದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಹೆಸರು ಮತ್ತು ಫೋನ್ ಸಂಖ್ಯೆಯನ್ನು ದಾಖಲಿಸಿದೆ ಎನ್ನಲಾಗ್ತಿದೆ.
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಹಗರಣದಲ್ಲಿ ಇಡಿ ಅಧಿಕಾರಿಗಳು ಸುದೀರ್ಘ 27 ಗಂಟೆಗಳ ವಿಚಾರಣೆಯ ನಂತರ ಸಚಿವ ಪಾರ್ಥ ಚಟರ್ಜಿ ಅವರನ್ನು ಶನಿವಾರ ಬೆಳಗ್ಗೆ ಬಂಧಿಸಿದ್ದರು. ವಿಚಾರಣೆ ವೇಳೆ ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ಏಕೈಕ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದು, ಅವರನ್ನು ಭೇಟಿ ಮಾಡಲು ಅಥವಾ ಕರೆ ಮಾಡಲು ಬಯಸಿದ್ದೇನೆಂದು ಪಾರ್ಥ ಚಟರ್ಜಿ ಹೇಳಿದ್ದರು. ಆದರೆ, ನನ್ನ ಬಗ್ಗೆ ಯಾವುದೇ ವಿವರ ಪಡೆಯಲು ಸಿಎಂ ಅವರನ್ನು ಮಾತ್ರ ಸಂಪರ್ಕಿಸಬಹುದು ಎಂದಿದ್ದರು ಎಂದು ತಿಳಿದು ಬಂದಿದೆ.