ನವದೆಹಲಿ:ಭಾರತದ ಸುಮಾರು 5.62 ಲಕ್ಷ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಡೇಟಾ ಬಳಸಿಕೊಂಡ ಆರೋಪದ ಮೇಲೆ ಬ್ರಿಟನ್ ಸಂಸ್ಥೆಗಳಾದ ಕೇಂಬ್ರಿಡ್ಜ್ ಅನಾಲಿಟಿಕಾ ಲಿಮಿಟೆಡ್ ಮತ್ತು ಗ್ಲೋಬಲ್ ಸೈನ್ಸ್ ರಿಸರ್ಚ್ ಲಿಮಿಟೆಡ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ.
ಗ್ಲೋಬಲ್ ಸೈನ್ಸ್ ರಿಸರ್ಚ್ ಲಿಮಿಟೆಡ್ (ಜಿಎಸ್ಆರ್ಎಲ್) ಸ್ಥಾಪಕ, ನಿರ್ದೇಶಕ ಡಾ. ಅಲೆಕ್ಸಾಂಡರ್ ಕೊಗಾನ್ ಹಾಗೂ ಕೇಂಬ್ರಿಡ್ಜ್ ಅನಾಲಿಟಿಕಾದ ಮಾಜಿ ಸಿಇಒ ಅಲೆಕ್ಸಾಂಡರ್ ನಿಕ್ಸ್ ಪ್ರಕರಣದ ಆರೋಪಿಗಳಾಗಿದ್ದಾರೆ ಎಂದು ಸಿಬಿಐ ತಿಳಿಸಿದೆ.
ಇದನ್ನೂ ಓದಿ: ಜೈಪುರದಲ್ಲಿ ಐಟಿ ದಾಳಿ: 1,400 ಕೋಟಿ ರೂ. ತೆರಿಗೆ ವಂಚನೆ ಬಯಲು
ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ದತ್ತಾಂಶವನ್ನು ಅಕ್ರಮವಾಗಿ ಈ ಎರಡು ಕಂಪನಿಗಳು ಬಳಸಿಕೊಂಡಿವೆ ಎಂದು 2018ರಲ್ಲಿ ಮಾಧ್ಯಮಗಳು ವರದಿ ಮಾಡಿದ್ದ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ದೂರು ನೀಡಿತ್ತು. ಕೇಂಬ್ರಿಡ್ಜ್ ಅನಾಲಿಟಿಕಾವು, ನಾವು ಇಂಗ್ಲೆಂಡ್ ನಾಗರಿಕರಿಗೆ ಸಂಬಂಧಿಸಿದ ಡೇಟಾವನ್ನು ಮಾತ್ರ ಜಿಎಸ್ಆರ್ಎಲ್ನಿಂದ ಪಡೆದಿದ್ದೆವು ಎಂದು ಹೇಳಿ ಸಚಿವಾಲಯದ ಇತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರಲಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.
ಜಿಎಸ್ಆರ್ಎಲ್ ನಿರ್ದೇಶಕ ಅಲೆಕ್ಸಾಂಡರ್ ಕೊಗಾನ್ 'thisisyourdigitallife' ಎಂಬ ಹೆಸರಿನ ಆ್ಯಪ್ ರಚಿಸಿ, ಕಾನೂನುಬಾಹಿರವಾಗಿ ಫೇಸ್‌ಬುಕ್ ಬಳಕೆದಾರರ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು ಎಂಬುದು ಸಿಬಿಐ ತನಿಖೆಯಲ್ಲಿ ಬಯಲಾಗಿದೆ. ಈ ಡೇಟಾವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಕೇಂಬ್ರಿಡ್ಜ್ ಅನಾಲಿಟಿಕಾಕ್ಕೆ ನೀಡುತ್ತಿದ್ದರು ಎಂದು ಸಿಬಿಐ ಆರೋಪಿಸಿದೆ.