ದಾನಪುರ(ಬಿಹಾರ): ಮದುವೆ ಮಂಪಟಕ್ಕೆ ನುಗ್ಗಿದ ವ್ಯಕ್ತಿಯೋರ್ವ ವಧುವಿನ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಬಿಹಾರದ ದಾನಪುರದಲ್ಲಿ ವರದಿಯಾಗಿದೆ.
ರೂಪಾಶ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರೀನ್ ಹೆರಿಟೇಜ್ ಹಾಲ್‌ನಲ್ಲಿ ಮದುವೆ ನಡೆಯುತ್ತಿದ್ದಾಗ ಕೃತ್ಯ ನಡೆದಿದೆ. ವಧುವಿನ ಕೊಠಡಿಗೆ ಬಂದ ಕಳ್ಳ ಟ್ರಾಲಿ ಬ್ಯಾಗ್ ತೆಗೆದುಕೊಂಡು ಕ್ಷಣಮಾತ್ರದಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ. ಮಧ್ಯಾಹ್ನ 2.13ರ ಸಮಯದಲ್ಲಿ ಆರೋಪಿ ಚಿನ್ನಾಭರಣಗಳೊಂದಿಗೆ ಹಾಲ್‌ನಿಂದ ಹೊರ ಹೋಗುತ್ತಿರುವಾಗ ಪದೇ ಪದೇ ಹಿಂದಿರುಗಿ ನೋಡುತ್ತಿದ್ದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ರೂಪಾಶ್‌ಪುರದ ಗೋಲಾ ರಸ್ತೆಯ ನಿವಾಸಿ ಅರುಣ್ ಸಿಂಗ್ ಅವರ ಪುತ್ರಿಯ ವಿವಾಹ ನಡೆಯುತ್ತಿತ್ತು. ಪಟ್ನಾದ ಬೋರಿಂಗ್ ರಸ್ತೆಯಿಂದ ವಧುವಿನ ಮೆರವಣಿಗೆ ಬಂದಿತ್ತು. ವಜ್ರ, ಚಿನ್ನ, ಬೆಳ್ಳಿ ಆಭರಣ ತುಂಬಿದ ನೀಲಿ ಬಣ್ಣದ ಟ್ರಾಲಿ ಬ್ಯಾಗನ್ನು ವಧುವಿಗಾಗಿ ತರಲಾಗಿತ್ತು. ಮೆರವಣಿಗೆ ಮುಗಿಸಿ ಬಂದು ವಧುವಿನ ಕೊಠಡಿಯಲ್ಲಿ ಚಿನ್ನಾಭರಣ ಇರಿಸಿದಾಗ ಕೆಲಸದವರ ಸಮವಸ್ತ್ರದಲ್ಲಿ ಬಂದಿದ್ದ ಕಳ್ಳ ತನ್ನ ಕೈಚಳಕವನ್ನು ಪ್ರದರ್ಶಿಸಿದ್ದಾನೆ.
ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವಧುವಿನ ತಂದೆ ಅರುಣ್ ಸಿಂಗ್ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಯನ್ನು ಪತ್ತೆ ಹಚ್ಚುವುದಾಗಿ ಪೊಲೀಸರು ತಿಳಿಸಿದ್ದಾರೆ.