ಬೆಂಗಳೂರು :ದೈಹಿಕ ಸಂಬಂಧಕ್ಕೆ ಅಡ್ಡಿ ಬಂದ ಕಾರಣಕ್ಕೆ ಇಬ್ಬರು ಪ್ರೇಯಸಿಯರ ಜೊತೆ ಸೇರಿ ರೌಡಿಶೀಟರ್ 10 ವರ್ಷದ ಬಾಲಕನನ್ನು ಹತ್ಯೆ ಮಾಡಿದ್ದ ಪ್ರಕರಣವನ್ನು ಮೈಕೊ ಲೇಔಟ್ ಪೊಲೀಸರು ಭೇದಿಸಿದ್ದಾರೆ. ಬಾಲಕನ ತಾಯಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕನನ್ನು ಹತ್ಯೆ ಮಾಡಿದ್ದ ಬಂಧಿತರು ತಮಿಳುನಾಡಿನ ನಿರ್ಜನ ಪ್ರದೇಶವೊಂದರಲ್ಲಿ ಶವ ಎಸೆದಿದ್ದರು. ಮಡಿವಾಳ ಪೊಲೀಸ್ ಠಾಣೆಯ ರೌಡಿಶೀಟರ್ ಸುನಿಲ್, ಪ್ರಿಯತಮೆ ಸಿಂಧೂ ಹಾಗೂ ಬಾಲಕನ ತಾಯಿಯನ್ನು ಬಂಧಿಸಿ ಪೋಸ್ಕೊ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಜೈಲಿಗಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳೆಲ್ಲರೂ ಒಂದೇ ಏರಿಯಾದಲ್ಲಿ ವಾಸ ಮಾಡುತ್ತಿದ್ದರು. ಕಳೆದ ಫೆಬ್ರುವರಿ 7ರಂದು ಬಾಲಕನನ್ನು ಕೊಲೆ ಮಾಡಿ ತಮಿಳುನಾಡಿನಲ್ಲಿ ಶವ ಎಸೆದು ಬಂದಿದ್ದರು. ಕೊಲೆಯಾದ ಆರು ತಿಂಗಳ ಬಳಿಕ ಆ.25ರಂದು ಮನೆಯವರ ಒತ್ತಡದಿಂದ ಬಾಲಕನ ತಾಯಿ ದೂರು ನೀಡಿದ್ದರು.
ದೂರು ನೀಡುವಾಗ ರೌಡಿಶೀಟರ್ ಜೊತೆಗಿದ್ದ. ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು ದೂರುದಾರರು ಅನುಮಾನಾಸ್ಪದ ವರ್ತನೆ ಕಂಡು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ, ಕೃತ್ಯ ಎಸಗಿರುವುದನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.
ಸಂಬಂಧಕ್ಕೆ ಅಡ್ಡ ಬರ್ತಾನೆಂದು ಬಾಲಕನ ಹತ್ಯೆ
ಮೃತ ಬಾಲಕನ ತಾಯಿ ತನ್ನ ಪತಿಯಿಂದ ದೂರವಾಗಿದ್ದಳು. ಈ ನಡುವೆ ಅಜ್ಜಿ ಜೊತೆ ಬಾಲಕನ ಒಡನಾಟ ಇದ್ದಿದ್ದರಿಂದ ಆಗಾಗ ಅಜ್ಜಿಯ ಮನೆಗೆ ಬಾಲಕನನ್ನು ಬಿಟ್ಟು ಬರುತ್ತಿದ್ದಳು. ಇನ್ನೊಂದೆಡೆ ಈಕೆ ರೌಡಿಶೀಟರ್‌ನೊಂದಿಗೆ ಸಂಬಂಧ ಹೊಂದಿದ್ದಳು. ಇದನ್ನು ಅರಿತಿದ್ದ ಮಗ ತಾಯಿಗೆ ಪ್ರಶ್ನೆ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಆಕೆ ರೌಡಿಶೀಟರ್‌ಗೆ ವಿಷಯ ತಿಳಿಸಿದ್ದಳು.
ಆತನ ಮನೆಯಲ್ಲಿ ಮಗನನ್ನು ಕೆಲ ದಿನಗಳ ಕಾಲ ಇರಿಸಿದ್ದಳು. ಈ ವೇಳೆ ಬಾಲಕನಿಗೆ ವಿಕೃತವಾಗಿ ದೈಹಿಕ ದೌರ್ಜನ್ಯ ಎಸಗಿದ್ದಾನೆ. ತನ್ನ ದೈಹಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಭಾವಿಸಿ ಬಲವಾದ ಪೈಪ್ನಿಂದ ಹೊಡೆದು ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಮತ್ತೋರ್ವ ಪ್ರೇಯಸಿ ಹಾಗೂ ಬಾಲಕನ ತಾಯಿಯನ್ನು ಮನೆಗೆ ಕರೆಯಿಸಿಕೊಂಡಿದ್ದ.
ಕೊಲೆ ವಿಷಯ ತಿಳಿಸಿ ಬಾಲಕನ ತಾಯಿಗೆ ಸಮಾಧಾನ ಮಾಡಿ ಹತ್ಯೆ ವಿಷಯ ಯಾರಿಗೂ ಹೇಳದಂತೆ ತಾಕೀತು ಮಾಡಿ ಆಕೆಯ ತಾಯಿ ಮನೆಗೆ ಕಳುಹಿಸಿದ್ದರು. ಸಾಕ್ಷ್ಯ ನಾಶ ಮಾಡಲು ಶವವನ್ನು ಕಾರಿನಲ್ಲಿ ಇರಿಸಿಕೊಂಡು ಪ್ರೇಯಸಿ ಜೊತೆ ತಮಿಳುನಾಡಿನ ಬರಗೂರ್ ಬಳಿಯ ನಿರ್ಜನ ಪ್ರದೇಶವೊಂದರಲ್ಲಿ ಎಸೆದು ಬಂದಿದ್ದರು.
ಕೊಲೆ ರಹಸ್ಯ ಗೊತ್ತಾಗಿದ್ದು ಹೇಗೆ?:ಕೊಲೆ ಮಾಡಿದ ಬಳಿಕ ಆರೋಪಿಗಳೆಲ್ಲರೂ ಏನೂ ಆಗಿಲ್ಲ ಎಂಬಂತೆ ಸಹಜವಾಗಿ ನಟಿಸಿದ್ದರು. ಮತ್ತೊಂದೆಡೆ ಮೃತ ಬಾಲಕನ ಕುಟುಂಬಸ್ಥರು ಹಾಗೂ ಸಂಬಂಧಿಗಳು ಬಾಲಕನ ಬಗ್ಗೆ ಪ್ರಶ್ನಿಸುತ್ತಿದ್ದರು. ಸ್ನೇಹಿತರ ಮನೆಯಲ್ಲಿ ಇರಿಸಿರುವುದಾಗಿ ಬಾಲಕನ ತಾಯಿ ಸಮಜಾಯಿಷಿ ನೀಡಿದ್ದಳು.
ದಿನೇದಿನೆ ಒತ್ತಡ ಹೆಚ್ಚಾಗುತ್ತಿದ್ದಂತೆ ಮನೆಯವರ ಒತ್ತಡಕ್ಕೆ ಮಣಿದು ಆರು ತಿಂಗಳ ಬಳಿಕ ಮಗ ಕಾಣೆಯಾಗಿರುವುದಾಗಿ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಳು. ಇದರಿಂದ ಅನುಮಾನಗೊಂಡ ಪೊಲೀಸರು ಮಹಿಳೆ ಜೊತೆ ಒಡನಾಟ ಬೆಳೆಸಿಕೊಂಡಿದ್ದ ರೌಡಿಶೀಟರ್‌ನನ್ನು ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದರಿಂದ ಬಾಲಕನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ನಗರ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವನ್ ತಿಳಿಸಿದ್ದಾರೆ.