ಮಂಗಳೂರು:ಬಿಟ್ ಕಾಯಿನ್ ಸಂಸ್ಥೆಯ ಅಡ್ಮಿನ್ ಎಂದು ಹೇಳಿಕೊಂಡು ಲಕ್ಷಾಂತರ ರೂ. ವಂಚನೆ ಆರೋಪ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳದ ಅಮ್ಮುಂಜೆ ನಿವಾಸಿ ಅಬ್ದುಲ್ ಲತೀಫ್ ಕಲಾಯಿ (34) ಬಂಧಿತ ಆರೋಪಿ. ಬಂಧಿತ ಆರೋಪಿ ಅಬ್ದುಲ್ ಲತೀಫ್ ಎಂಬವರು ‘ಬಿಟ್ ಕಾಯಿನ್ ಕ್ರಿಪ್ಟೊ ಕರೆನ್ಸಿ’ ಎಂಬ ಕಂಪನಿಯ ವೆಬ್‌ಸೈಟ್‌ನ ಅಡ್ಮಿನ್ ಎಂದು ಹೇಳಿಕೊಂಡು ಹಲವರಿಂದ ಹಣ ಸಂಗ್ರಹಿಸಿದ್ದಾನೆ.
ಇದನ್ನೂ ಓದಿ: ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ.. ಮದ್ಯಕ್ಕಾಗಿಯೇ ಕೊಲೆಯಾಗಿ ಹೋದನಾ..?
2018ರ ಜನವರಿ 3ರಂದು ಈ ಕಂಪನಿಗೆ ಮಂಗಳೂರು ಮೂಲದ ವ್ಯಕ್ತಿಯೋರ್ವರು 46 ಲಕ್ಷ ರೂ. ಬಂಡವಾಳ ಹೂಡಿದ್ದಾರೆ. 46 ಲಕ್ಷ ರೂ. ಪೈಕಿ 10 ಲಕ್ಷ ರೂ. ಹಿಂದಿರುಗಿಸಿದ್ದು, ಇನ್ನುಳಿದ 36 ಲಕ್ಷ ರೂ. ವಾಪಸ್ ಮಾಡದೇ ವಂಚಿಸಿದ್ದಾರೆ. ಆರೋಪಿಯು ಇದೇ ರೀತಿಯಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕಂಪನಿಗೆ ತೊಡಗಿಸುತ್ತಾ ಸಾವಿರಾರು ಜನರಿಗೆ ವಂಚನೆ ಮಾಡಿದ್ದಾನೆ ಎಂದು ಇಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.