ಬೆಳ್ತಂಗಡಿ (ದಕ್ಷಿಣ ಕನ್ನಡ): ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಗರ್ಭಪಾತ ಪ್ರಕರಣದಲ್ಲಿ ಪ್ರಮುಖ ಆರೋಪಿ ಸುಧೀರ್ ಜೋಗಿ ಎಂಬಾತನನ್ನು ಚಿಕ್ಕಮಗಳೂರಿನಲ್ಲಿ ಬೆಳ್ತಂಗಡಿ ಪೊಲೀಸರು ಸೆರೆ ಹಿಡಿದಿದ್ದಾರೆ. ಡಿಸೆಂಬರ್ 26, 2021 ರಂದು ಟಿವಿ ನೋಡಲು ತನ್ನ ಮನೆಗೆ ಬರುತ್ತಿದ್ದ ಬಾಲಕಿಯ ಮೇಲೆ ಆರೋಪಿ ದುಷ್ಕೃತ್ಯ ಎಸಗಿದ್ದಾನೆ. ಮತ್ತು ಈತನಿಗೆ ಹಲವರು ಸಾಥ್ ನೀಡಿದ್ದರು ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಪೋಕ್ಸೋ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್ಗಳಡಿ 2023ನೇ ಜನವರಿ 2 ರಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ನಿವಾಸಿ ಪ್ರಕರಣದ ಮೂರನೇ ಆರೋಪಿ ಮನೋಹರ (23) ಮತ್ತು ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ನಿವಾಸಿ ನಾಲ್ಕನೇ ಆರೋಪಿ ಮಾಧವ ಯಾನೆ ಮಾಧು(30) ಎಂಬವರನ್ನು ಜನವರಿ 7ರಂದು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇದೀಗ ಪ್ರಮುಖ ಆರೋಪಿ ಕಡಿರುದ್ಯಾವರ ಗ್ರಾಮದ ಕೊಪ್ಪದಗುಂಡಿ ನಿವಾಸಿ ಸುಧೀರ್ ಜೋಗಿ (27) ಎಂಬವನನ್ನು ಚಿಕ್ಕಮಗಳೂರಿನಲ್ಲಿ ಅರೆಸ್ಟ್ ಮಾಡಲಾಗಿದೆ.